ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ವಿಜಯ್ ಹಾಗೂ ಪ್ರಶಾಂತ್ ಕಿಶೋರ್; ತಮಿಳುನಾಡು ಚುನಾವಣೆ ಕುರಿತು ಗರಿಗೆದರಿದ ಕುತೂಹಲ

Photo credit: X/@Actor_Vijay
ಚೆನ್ನೈ: ʼತಮಿಳಗ ವೆಟ್ರಿ ಕಳಗಂʼ ಪಕ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದ ನಟ, ರಾಜಕಾರಣಿ ವಿಜಯ್, ವೇದಿಕೆಯಲ್ಲಿ ಚುನಾವಣಾ ತಜ್ಞ ಹಾಗೂ ಜನಸೂರಜ್ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್ ರೊಂದಿಗೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.
ಚುನಾವಣಾ ತಜ್ಞ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ಅವರೊಂದಿಗೆ ವಿಜಯ್ ವೇದಿಕೆ ಹಂಚಿಕೊಂಡಿರುವುದು ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಲೆಕ್ಕಾಚಾರದ ರಾಜಕೀಯ ವ್ಯೂಹ ಹೆಣೆಯುತ್ತಿರುವುದರ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಶಾಂತ್ ಕಿಶೋರ್ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಶಿಸ್ತುಬದ್ಧ, ದತ್ತಾಂಶ ಆಧಾರಿತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಭಾವಿಸಲಾಗಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕಟು ಟೀಕಾಕಾರರಾದ ವಿಜಯ್, ಈ ಎರಡೂ ಪಕ್ಷಗಳು ತಮಿಳುನಾಡಿನ ಹಿತಾಸಕ್ತಿಯನ್ನು ಮರೆತು, ಗುಪ್ತ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸುತ್ತಾ ಬರುತ್ತಿದ್ದಾರೆ. ಡಿಎಂಕೆ ಪಕ್ಷದ ಆಡಳಿತ, ಹದಗೆಟ್ಟ ಕಾನೂನು ಸುವ್ಯವಸ್ಥೆ ಹಾಗೂ ವಂಶಪಾರಂಪರ್ಯ ರಾಜಕಾರಣವನ್ನು ಟೀಕಿಸುತ್ತಿರುವ ವಿಜಯ್, ಮತ್ತೊಂದೆಡೆ, ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವವನ್ನೂ ವಿರೋಧಿಸುತ್ತಿದ್ದಾರೆ. ಹೀಗಿದ್ದೂ, ಅವರು ಎಐಡಿಎಂಕೆ ಬಗ್ಗೆ ಮೌನ ವಹಿಸಿರುವುದು, ಅವರು ಮುಂಬರುವ ವಿಧಾನಸಭೆಯಲ್ಲಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.