ವಕ್ಫ್ ಮಸೂದೆ ವಿರುದ್ಧ ನಟ ವಿಜಯ್ ನೇತೃತ್ವದ ಟಿವಿಕೆ ಪ್ರತಿಭಟನೆ; ಕಾನೂನು ಸಮರದ ಎಚ್ಚರಿಕೆ

ನಟ ವಿಜಯ್ (PTI)
ಚೆನ್ನೈ,: ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವು ಸಂಸತ್ತು ಅಂಗೀಕರಿಸಿರುವ ವಕ್ಫ್(ತಿದ್ದುಪಡಿ) ಮಸೂದೆ ವಿರುದ್ಧ ತಮಿಳುನಾಡಿನಾದ್ಯಂತ ಪ್ರತಿಭಟನೆಗಿಳಿದಿದೆ. ಮಸೂದೆಯು ಸಂವಿಧಾನಬಾಹಿರವಾಗಿದೆ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಕಿಡಿಕಾರಿರುವ ಪಕ್ಷವು ಅದನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಹೇಳಿಕೆಯಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ತೀವ್ರವಾಗಿ ಟೀಕಿಸಿರುವ ವಿಜಯ್, ಅದು ಬಹುಸಂಖ್ಯಾತ ಮತ್ತು ವಿಭಜಕ ರಾಜಕೀಯದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಮಸೂದೆಯು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ದಾಳಿಯಾಗಿದೆ ಮತ್ತು ಭಾರತದ ಜಾತ್ಯತೀತ ಮೌಲ್ಯಗಳ ಕುರಿತು ಕಳವಳಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿರುವ ಅವರು, ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್ ಮಸೂದೆಯು ಸಂವಿಧಾನದ ಘನತೆ ಮತ್ತು ಭಾರತದಲ್ಲಿ ಜಾತ್ಯತೀತ ಪ್ರಜಾಪ್ರಭುತ್ವದ ಮೂಲ ತತ್ವಗಳ ಮೇಲೆ ಮತ್ತೊಮ್ಮೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ. ಇದು ಮುಸ್ಲಿಮರ ಮೇಲೆ ಮಾನಸಿಕ ದಾಳಿಯಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.
ಶಾಸನವನ್ನು ಹಿಂದೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿರುವ ವಿಜಯ್, ಇಲ್ಲದಿದ್ದರೆ ಟಿವಿಕೆ ಮುಸ್ಲಿಮ್ ಸಮುದಾಯದೊಂದಿಗೆ ಕೈ ಜೋಡಿಸಲಿದೆ ಮತ್ತು ವಕ್ಫ್ ಹಕ್ಕುಗಳನ್ನು ರಕ್ಷಿಸಲು ಕಾನೂನು ಹೋರಾಟಗಳಲ್ಲಿ ಭಾಗಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟಿವಿಕೆ ತನ್ನ ಇತ್ತೀಚಿನ ಸಾಮಾನ್ಯ ಮಂಡಳಿ ಸಭೆಯಲ್ಲಿ ವಕ್ಫ್ ಮಸೂದೆಯ ವಿರುದ್ಧ ಮತ್ತು ಅದನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ನಿರ್ಣಯವನ್ನು ಅಂಗೀಕರಿಸಿತ್ತು.
ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಟಿವಿಕೆಯು ಬಿಜೆಪಿ ವಿರುದ್ಧ ಪ್ರಬಲ ಪ್ರತಿಪಕ್ಷವಾಗಿ ಗುರುತಿಸಿಕೊಳ್ಳುವುದರೊಂದಿಗೆ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ವಕ್ಫ್ ಮಸೂದೆಯನ್ನು ಸುತ್ತಿಕೊಂಡಿರುವ ವಿವಾದವು ಮಹತ್ವದ ವಿಷಯವಾಗಬಹುದು ಎಂದು ರಾಜಕೀಯ ವಿಶ್ಲೇಷಜ್ಞರು ಅಭಿಪ್ರಾಯಿಸಿದ್ದಾರೆ.