ಮೋದಿ ಕುರಿತ ಕಾರ್ಟೂನ್ ಪ್ರಕಟ | ಬಿಜೆಪಿ ದೂರು ನೀಡಿದ ಬೆನ್ನಲ್ಲೇ ತಮಿಳು ವಾರಪತ್ರಿಕೆ ʼವಿಕಟನ್ʼ ವೆಬ್ ಸೈಟ್ ಗೆ ನಿರ್ಬಂಧ

ವಿಕಟನ್ ಲೋಗೋ
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಟೂನ್ ಕುರಿತು ಬಿಜೆಪಿಯ ತಮಿಳುನಾಡು ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಪಕ್ಷವು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಮತ್ತು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ ಕೆಲವೇ ಗಂಟೆಗಳ ನಂತರ ತಮಿಳು ವಾರಪತ್ರಿಕೆ ವಿಕಟನ್ ನ ವೆಬ್ಸೈಟ್ ಶನಿವಾರ ಬ್ಲಾಕ್ ಆಗಿದೆ ಎಂದು ವರದಿಯಾಗಿದೆ.
ಹಲವಾರು ಸುದ್ದಿ ಸಂಸ್ಥೆಗಳು ತಮ್ಮ ವೆಬ್ಸೈಟ್ ಅನ್ನು ನಿರ್ಬಂಧಿಸಲಾಗಿದೆ ಎಂದು ವರದಿ ಮಾಡುತ್ತಿವೆ. ಆದರೆ ಕೇಂದ್ರದಿಂದ ಯಾವುದೇ ಅಧಿಕೃತ ಅಧಿಸೂಚನೆ ಬಂದಿಲ್ಲ ಎಂದು ತಡರಾತ್ರಿ ವಿಕಟನ್ ಎಕ್ಸ್ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದೆ.
"ವಿಕಟನ್ ಒಂದು ಶತಮಾನದಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿದೆ. ಕಾರ್ಟೂನ್ ಕಾರಣದಿಂದಾಗಿ ಕೇಂದ್ರವು ಸೈಟ್ ಅನ್ನು ನಿರ್ಬಂಧಿಸಿದ್ದರೆ, ನಾವು ಅದರ ವಿರುದ್ಧ ಕಾನೂನುಬದ್ಧವಾಗಿ ಹೋರಾಡುತ್ತೇವೆ" ಎಂದು ಅದು ಹೇಳಿದೆ.
ಚೆನ್ನೈ ಪ್ರೆಸ್ ಕ್ಲಬ್, ಘಟನೆಯನ್ನು ಖಂಡಿಸಿ, ವಿಕಟನ್ಗೆ ಬೆಂಬಲ ನೀಡುವುದಾಗಿ ಹೇಳಿದೆ.
ತಮಿಳು ದಿನಪತ್ರಿಕೆ 'ವಿಕಟನ್' ತನ್ನ ಫೆಬ್ರವರಿ 13 ರ ಆವೃತ್ತಿಯಲ್ಲಿ, ತನ್ನ ಡಿಜಿಟಲ್ ನಿಯತಕಾಲಿಕೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಕೈಕೋಳ ಧರಿಸಿದ ಪ್ರಧಾನಿ ಮೋದಿಯವರ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು.ಅಮೆರಿಕದಿಂದ ಅಕ್ರಮ ಭಾರತೀಯ ವಲಸಿಗರನ್ನು ಕೈಕೋಳ ಧರಿಸಿ ಅಮಾನವೀಯವಾಗಿ ಗಡೀಪಾರು ಮಾಡುವುದನ್ನು ವ್ಯಂಗ್ಯ ಚಿತ್ರವು ಟೀಕಿಸಿತ್ತು.
ಈ ವ್ಯಂಗ್ಯಚಿತ್ರವು ಬಿಜೆಪಿ ಬೆಂಬಲಿಗರಿಂದ ಟೀಕೆಗೆ ಗುರಿಯಾಯಿತು. ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಕ್ಷವು ಪ್ರೆಸ್ ಕ್ಲಬ್ಮ ಆಫ್ತ್ತು ಇಂಡಿಯಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರಿಗೆ ದೂರು ಸಲ್ಲಿಸಿದೆ ಎಂದು ಅಣ್ಣಾಮಲೈ ಹೇಳಿದರು.
ತಮ್ಮ ದೂರಿನಲ್ಲಿ, ಅಣ್ಣಾಮಲೈ ಈ ವ್ಯಂಗ್ಯಚಿತ್ರವು ಪ್ರಧಾನಿಯವರ ಅಮೆರಿಕ ಭೇಟಿಯ ರಾಜತಾಂತ್ರಿಕ ಮಹತ್ವವನ್ನು ಕಳಂಕಿತಗೊಳಿಸುವ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಸಮಾಧಾನಪಡಿಸುವ ಗುರಿಯನ್ನು ಹೊಂದಿರುವ ಉದ್ದೇಶಪೂರ್ವಕ ಚಿತ್ರಣವಾಗಿದೆ ಎಂದು ಹೇಳಿದ್ದಾರೆ. ಅಂತಹ ಚಿತ್ರಣವು ಪತ್ರಿಕೋದ್ಯಮದ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ಅವರ ದೂರಿನಲ್ಲಿ ಆರೋಪಿಸಿದ್ದಾರೆ. ವಿಕಟನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.