ರಸ್ತೆ ಬದಿ ವರ್ತಕರ ಕುರಿತ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ : ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ಸ್ಪಷ್ಟನೆ
ವಿಕ್ರಮಾದಿತ್ಯ ಸಿಂಗ್ | PC : PTI
ಹೊಸದಿಲ್ಲಿ : ರಸ್ತೆ ಬದಿ ವರ್ತಕರ ಕುರಿತು ತಾವು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಉತ್ತರ ಪ್ರದೇಶ ಮಾದರಿಯನ್ನು ಜಾರಿಗೆ ತರಲು ಹೊರಟಿದ್ದೇನೆ ಎಂದು ತಮ್ಮ ಇತ್ತೀಚಿನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರವಾಗಿ ಸೈದ್ಧಾಂತಿಕತೆ ಕುರಿತು ಕಳವಳಗೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಅನ್ನು ಸಮಾಧಾನಗೊಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳು ತಮ್ಮ ಹೆಸರು, ವಿಳಾಸ ಪ್ರದರ್ಶಿಸುವುದು ಕಡ್ಡಾಯ ಎಂದು ತಾವು ಇತ್ತೀಚೆಗೆ ನೀಡಿದ್ದ ಹೇಳಿಕೆಯ ಕುರಿತು ಕಾಂಗ್ರೆಸ್ ಹೈಕಮಾಂಡ್ ಕಿಡಿ ಕಾರಿದ್ದ ಬೆನ್ನಿಗೇ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಯಾರೂ ಪಕ್ಷದ ನೀತಿ ಹಾಗೂ ಸೈದ್ಧಾಂತಿಕತೆಯ ವಿರುದ್ಧ ಹೋಗಲು ಅವಕಾಶ ನೀಡುವುದಿಲ್ಲ ಎಂದೂ ಪಕ್ಷದ ಹೈಕಮಾಂಡ್ ಅವರಿಗೆ ಎಚ್ಚರಿಕೆ ನೀಡಿತ್ತು.
ರಸ್ತೆ ಬದಿ ವರ್ತಕರ ಕುರಿತು ವಿಕ್ರಮಾದಿತ್ಯ ಸಿಂಗ್ ನೀಡಿದ್ದ ಹೇಳಿಕೆಯು ವಿವಾದ ಸೃಷ್ಟಿಸಿದ ಬೆನ್ನಿಗೇ, ಶುಕ್ರವಾರ ಅವರೊಂದಿಗೆ ಸಭೆ ನಡೆಸಿದ್ದ ಕಾಂಗ್ರೆಸ್ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಹುಲ್ ಗಾಂಧಿಯವರ ದ್ವೇಷವನ್ನು ಪ್ರೀತಿಯೊಂದಿಗೆ ಹಿಮ್ಮೆಟ್ಟಿಸುವ ಮಂತ್ರದಲ್ಲಿ ಪಕ್ಷ ವಿಶ್ವಾಯಸವಿರಿಸಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.
ಹಿಮಾಚಲ ಪ್ರದೇಶ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಸಚಿವರಾದ ವಿಕ್ರಮಾದಿತ್ಯ ಸಿಂಗ್ ರಸ್ತೆ ಬದಿ ವರ್ತಕರು, ವಿಶೇಷವಾಗಿ ಆಹಾರ ಮಾರಾಟಗಾರರು ತಮ್ಮ ಹೆಸರು ಮತ್ತು ವಿಳಾಸ ಇರುವ ಗುರುತಿನ ಚೀಟಿಯನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದರು.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರದ ನಿರ್ದೇಶನದ ಪ್ರೇರಣೆಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದರು.
ಆದರೆ, ವಿಕ್ರಮಾದಿತ್ಯ ಸಿಂಗ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್ ಪಕ್ಷವು, ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಅಲ್ಲದೆ ಇಂಡಿಯಾ ಮೈತ್ರಿಕೂಟದ ಪಕ್ಷಗಳೂ ವಿಕ್ರಮಾದಿತ್ಯ ಸಿಂಗ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.