ದಲಿತ ವೃದ್ಧರ ತಲೆ ಮೇಲೆ ಚಪ್ಪಲಿಯಿರಿಸಿ ಕ್ಷಮೆ ಕೋರುವಂತೆ ಬಲವಂತಪಡಿಸಿದ ಗ್ರಾಮಸ್ಥರು
ದೇವರ ನಿಂದನೆ ಆರೋಪ
Photo: X \ @mahir_mooknayak
ಜೈಪುರ: ಭಜನೆಯಲ್ಲಿ ಸ್ಥಳೀಯ ದೇವತೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ದಲಿತ ಸಮುದಾಯದ 70 ವರ್ಷದ ವೃದ್ಧರೋರ್ವರ ತಲೆ ಮೇಲೆ ಪಾದರಕ್ಷೆಗಳನ್ನು ಹೊರಿಸಿ ಸಾರ್ವಜನಿಕರಿಂದ ಕ್ಷಮೆ ಕೇಳಿಸಿದ ಅಮಾನವೀಯ ಘಟನೆ ರಾಜಸ್ಥಾನ ಚಿತ್ತೋರ್ಗಢದ ದುಗಾರ್ ಗ್ರಾಮದಲ್ಲಿ ನಡೆದಿದೆ.
ಸೆಪ್ಟಂಬರ್ 16ರಂದು ಇಲ್ಲಿ ನಡೆದ ಸಾರ್ವಜನಿಕ ಭಜನೆಯಲ್ಲಿ ಬಗ್ದಾವತ್ ಹಾಡಿನ ನಿರೂಪಣೆಯ ಸಂದರ್ಭ ದಲಿತ ಸಮುದಾಯಕ್ಕೆ ಸೇರಿದ ವೃದ್ಧ ದಾಲ್ಚಂದ್ ಬಲಾಯಿ ಗುರ್ಜರ ಸಮುದಾಯದ ಪೂಜನೀಯ ‘ಸಾಧು ಮಾತೆ’ ದೇವತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಾಲ್ಚಂದ್ ಬಲಾಯಿ ಅವರನ್ನು ದುಗಾರ್ನ ಗುರ್ಜರ ಸಮುದಾಯ ಅದೇ ದಿನ ಸಂಜೆ ಸಭೆಗೆ ಆಗಮಿಸುವಂತೆ ಸೂಚಿಸಿತ್ತು.
ಈ ಸಭೆಯಲ್ಲಿ ಗುರ್ಜರ ಸಮುದಾಯದವರು ತಮ್ಮ ದೇವತೆಯಾದ ಸಾಧು ಮಾತೆಯನ್ನು ಅವಮಾನಿಸಿರುವ ಆರೋಪದಲ್ಲಿ ದಾಲ್ಚಂದ್ ಬಲಾಯಿಗೆ ಶಿಕ್ಷೆಯಾಗಿ ತಲೆಯ ಮೇಲೆ ಪಾದರಕ್ಷೆಗಳನ್ನು ಹೊತ್ತುಕೊಂಡು 60ರಿಂದ 70 ಜನರ ಮುಂದೆ ಕ್ಷಮೆ ಕೋರುವಂತೆ ಬಲವಂತಪಡಿಸಿದ್ದಾರೆ. ಅಲ್ಲದೆ ಅವರಿಗೆ 1,100 ರೂ. ದಂಡ ಕೂಡ ವಿಧಿಸಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆದ ಬಳಿಕ ಬೆಳಕಿಗೆ ಬಂದಿದೆ. ವೀಡಿಯೊದಲ್ಲಿ ದಲಿತ ವೃದ್ಧರೋರ್ವರು ತಲೆ ಮೇಲೆ ಪಾದರಕ್ಷೆಗಳನ್ನು ಹೊತ್ತುಕೊಂಡು ಗುರ್ಜರರ ಸಮುದಾಯದಲ್ಲಿ ಕ್ಷಮೆ ಕೋರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಘಟನೆ ಬೆಳಕಿಗೆ ಬಂದ ಮೂರು ದಿನದ ಬಳಿಕ ಮಂಗಳವಾರ ದಲಿತ ಸಂಘಟನೆಗಳು ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಅರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ರಾತ್ರಿ 7 ಮಂದಿಯ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಸುಖ್ದೇವ್, ದಿನೇಶ್ ಹಾಗೂ ಬೆಹ್ರುಲಾಲ್ನನ್ನು ಬಂಧಿಸಿದ್ದಾರೆ. ತಾನು ಬಾಯ್ತಪ್ಪಿನಿಂದ ‘ಸಾಧು ಮಾತೆ’ ಕುರಿತು ಹೇಳಿಕೆ ನೀಡಿದ್ದೇನೆ. ಇದಕ್ಕೆ ತಾನು ಕ್ಷಮೆ ಕೂಡ ಯಾಚಿಸಿದ್ದೇನೆ. ಆದರೆ, ತನಗೆ ಈಗಲೂ ಬೆದರಿಕೆ ಮುಂದುವರಿದಿದೆ ಎಂದು ದಾಲ್ಚಂದ್ ಬಲಾಯಿ ಅವರು ನೀಡಿದ ದೂರಿನಲ್ಲಿ ಹೇಳಿದ್ದಾರೆ ಎಂದು ಬೇಗುನ್ ಡಿಎಸ್ಪಿ ಬದ್ರಿಲಾಲ್ ರಾವ್ ಅವರು ತಿಳಿಸಿದ್ದಾರೆ.