ವಿಚ್ಛೇದನ ಒಪ್ಪಂದ ಉಲ್ಲಂಘನೆ: ಮಹಿಳೆಗೆ ಜೈಲು ಶಿಕ್ಷೆ
ಹೊಸದಿಲ್ಲಿ: ಒಂದೇ ಬಾರಿ ಪರಿಹಾರ ಮೊತ್ತ ನೀಡುವ ಪತಿ ಜತೆಗಿನ ವಿಚ್ಛೇದನ ಒಪ್ಪಂದವನ್ನು ಉಲ್ಲಂಘಿಸಿ ಅಧಿಕ ಪರಿಹಾರ ಮೊತ್ತಕ್ಕೆ ಚೌಕಾಶಿ ಮಾಡಲು ಯತ್ನಿಸಿದ ಮಹಿಳೆಯೊಬ್ಬರಿಗೆ ದೆಹಲಿ ಹೈಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದ ಸ್ವಾರಸ್ಯಕರ ಪ್ರಕರಣ ಬೆಳಕಿಗೆ ಬಂದಿದೆ.
ನ್ಯಾಯಾಲಯಕ್ಕೆ ನೀಡಿದ್ದ ಇತ್ಯರ್ಥ ಒಪ್ಪಂದ ಕುರಿತ ಮುಚ್ಚಳಿಕೆಯನ್ನು ನಿರಾಕರಿಸುವ ಮಹಿಳೆಯ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, "ಇಂತಹ ನಡವಳಿಕೆಯನ್ನು ಕೋರ್ಟ್ ಒಪ್ಪಿಕೊಂಡರೆ ಕಾನೂನು ಪ್ರಕ್ರಿಯೆ ಬಗ್ಗೆ ಮತ್ತು ನ್ಯಾಯಾಲಯಕ್ಕೆ ನೀಡಿದ ಮುಚ್ಚಳಿಕೆಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ಇರುವ ನಂಬಿಕೆ ನಶಿಸುತ್ತದೆ" ಎಂದು ಸ್ಪಷ್ಟಪಡಿಸಿದೆ.
ಮಹಿಳೆಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ, ಪತ್ನಿಯ ನಿಲುವು, ನ್ಯಾಯಾಲಯದ ಬಗೆಗೆ ಅಲ್ಪಗೌರವ ಇರುವುದನ್ನು ತೋರಿಸುತ್ತದೆ. ಇದಕ್ಕೆ ಅವಕಾಶ ನೀಡಿದರೆ, ನ್ಯಾಯ ವ್ಯವಸ್ಥೆಯ ವಿಡಂಬನೆ ಮತ್ತು ಕೋರ್ಟ್ ನ ಅಣಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಮಹಿಳೆ ತಾನೇ ನೀಡಿದ ಮುಚ್ಚಳಿಕೆಯನ್ನು ಮಾನ್ಯ ಮಾಡಲು ವಿಫಲವಾಗುವ ಮೂಲಕ, ನ್ಯಾಯಾಲಯದ ಘನತೆಯನ್ನು ಕಡಿಮೆ ಮಾಡಿದಂತಾಗಿದೆ ಹಾಗೂ ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ ಎಂದು ತೀವ್ರವಾಗಿ ಆಕ್ಷೇಪಿಸಿದೆ.
ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ, ಮಹಿಳೆಯ ನಡವಳಿಕೆಯನ್ನು ನ್ಯಾಯ ಪ್ರಕ್ರಿಯೆಯ ದುರುಪಯೋಗ ಎಂದು ಬಣ್ಣಿಸಿದರು. ಪತಿ- ಪತ್ನಿ ಪರಸ್ಪರರು ದಾಖಲಿಸಿರುವ 20 ಪ್ರಕರಣಗಳು ಕೇವಲ ಒಳ್ಳೆಯ ಆರ್ಥಿಕ ಚೌಕಾಶಿಗಾಗಿ ಇದ್ದು, ಇದನ್ನು ಮುಂದುವರಿಸಬೇಕು ಎಂದು ಮಹಿಳೆ ವಾದಿಸಿದ್ದರು.
ವಿಚ್ಛೇದನ ಒಪ್ಪಂದದಂತೆ ಮಹಿಳೆಗೆ ಮುಂಬೈನಲ್ಲಿದ್ದ ಅಪಾರ್ಟ್ಮೆಂಟ್ ಹಸ್ತಾಂತರಿಸಲಾಗಿದೆ. ಆದರೆ ಇತ್ಯರ್ಥದ ವೇಳೆ ಒಪ್ಪಿಕೊಂಡ ಅಂಶಕ್ಕೆ ವಿರುದ್ಧವಾಗಿ ಬಾಕಿ ಇರುವ ನಿರ್ವಹಣೆ ಬಾಕಿಯನ್ನೂ ಪಾವತಿಸುವಂತೆ ಮಹಿಳೆ ಒತ್ತಾಯಿಸಿದ್ದಾರೆ ಎಂದು ಪತಿಯ ಪರ ವಕೀಲ ವಾದ ಮಂಡಿಸಿದ್ದರು.