ಪ್ರಧಾನಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕಪಿಲ್ಸಿಬಲ್
ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಆಕ್ರೋಶ
ಕಪಿಲ್ಸಿಬಲ್ | PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳು ಮುಗಿದ ಬಳಿಕ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪರೋಕ್ಷವಾಗಿ ಹೇಳಿರುವುದು, ತನಿಖಾ ಏಜೆನ್ಸಿಗಳು ಪ್ರಧಾನಿ ಕುಮ್ಮಕ್ಕಿನಂತೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ತಮ್ಮ ವೋಟ್ ಬ್ಯಾಂಕ್ ಅನ್ನು ಓಲೈಸಲು ಪ್ರತಿಪಕ್ಷಗಳು ಮುಜ್ರಾ ನೃತ್ಯವನ್ನೂ ಮಾಡಲೂ ಸಿದ್ಧ ಎಂಬ ಪ್ರಧಾನಿಯವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಮೋದಿಯ ಈ ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಆದರೆ ಚುನಾವಣಾ ಆಯೋಗವು ಪ್ರಧಾನಿಯೊಂದಿಗೆ ಕೈಜೋಡಿಸಿದ್ಜು, ಯಾರೂ ಕೂಡಾ ಕಾರ್ಯಾಚರಿಸುತ್ತಿಲ್ಲವೆಂದರು.
ಹೊಸದಿಲ್ಲಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಬಲ್, ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದಲ್ಲಿ ನಳ್ಳಿ ನೀರು, ವಿದ್ಯುತ್ ಹಾಗೂ ಬ್ಯಾಂಕ್ಗಳಿಂದ ಹಣವನ್ನು ಕೂಡಾ ಜನರಿಂದ ಕಸಿದುಕೊಳ್ಳುತ್ತವೆ ಎಂಬ ಪ್ರಧಾನಿ ಹೇಳಿಕೆಗೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮುಜ್ರಾ ಹೇಳಿಕೆಗೆ ತೀವ್ರ ಕಿಡಿಕಾರಿದ ಸಿಬಲ್ ಅವರು ‘‘ಅವರು (ನರೇಂದ್ರ ಮೋದಿ) ಘನವೆತ್ತ ಹುದ್ದೆಯಲ್ಲಿದ್ದಾರೆ. ಒಂದು ವೇಳೆ ನೀವು ಪ್ರಧಾನಿ ಹುದ್ದೆಯ ಘನತೆಯನ್ನು ಇಷ್ಟೊಂದು ಕೆಳಕ್ಕೆ ಇಳಿಸಿದ್ದೀರಿ. ಸಾಮಾಜಿಕ ಮಾಧ್ಯಮಗಳಲ್ಲಿ ಏನು ಹೇಳಲಾಗುತ್ತಿದೆ ಎಂಬುದನ್ನು ನೋಡಿ. ನಿಮ್ಮ ಹೇಳಿಕೆಗಳು ಮಹಿಳೆಯರಿಗೂ ಅಪಮಾನಕರವಾಗಿದೆ ಎಂರು.
‘‘ನೀವು ಏನನ್ನು ಹೇಳಲು ಬಯಸುತ್ತಿದ್ದೀರಿ. ನೀವು ಮಹಿಳೆಯರನ್ನು, ಪ್ರತಿಪಕ್ಷ ನಾಯಕರನ್ನು ಅಪಮಾನಿಸುತ್ತಿದ್ದೀರಿ. ಉನ್ನತ ಮಟ್ಟದಿಂದ ಈ ಸಂದೇಶವನ್ನು ನೀವು ನೀಡುವಿರಾದರೆ, ಕೆಳಸ್ತರದಲ್ಲಿಯೂ ಅದು ಸಂಭವಿಸುತ್ತದೆ. ನೀವು ದ್ವೇಷದ ಸಂಸ್ಕೃತಿಯನ್ನು ಸೃಷ್ಟಿಸಲು ಬಯಸುತ್ತಿದ್ದೀರಿ. ಈ ರೀತಿಯಾಗಿ ವರ್ತಿಸಿದಲ್ಲಿ, ವಿಕಸಿತ ಭಾರತವನ್ನು ನಿರ್ಮಿಸಲು ನಿಮಗೆ ಸಾಧ್ಯವಾಗಲಾರದು ’’ ಎಂದು ರಾಜ್ಯಸಭಾದ ಪಕ್ಷೇತರ ಸಂಸದರಾದ ಸಿಬಲ್ ಹೇಳಿದರು.