ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಟಿಎಂಸಿ
ಡೆರೆಕ್ ಒಬ್ರಿಯನ್ , ನರೇಂದ್ರ ಮೋದಿ | Photo: PTI
ಕೋಲ್ಕತ್ತಾ: ವಾರಣಾಸಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರಕಾರದ ನಿಧಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಸೋಮವಾರ ಮುಖ್ಯ ಚುನಾವಣಾ ಆಯುಕ್ತರನ್ನುದ್ದೇಶಿಸಿ ಪತ್ರ ಬರೆದಿರುವ ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯನ್, “ಮಾದರಿ ನೀತಿ ಸಂಹಿತೆಯ ಜಾರಿಗೆ ಬಂದ ಮಾರ್ಚ್ 16ರಂದು ತಮ್ಮ ಸರಕಾರದ ಕಾರ್ಯಕ್ರಮಗಳನ್ನು ಎತ್ತಿ ತೋರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವು ಮತದಾರರನ್ನು ತಲುಪಿದೆ” ಎಂದು ಆರೋಪಿಸಿದ್ದಾರೆ.
ಮಾರ್ಚ್ 15ರಂದು ಮತದಾರರಿಗೆ ಪತ್ರದ ರೂಪದಲ್ಲಿ ಸಂದೇಶವೊಂದನ್ನು ಪ್ರಧಾನಿ ನರೇಂದ್ರ ಮೋದಿ ಬರೆದಿದ್ದಾರೆ ಎಂದು ಟಿಎಂಸಿ ನಾಯಕ ಒಬ್ರಿಯನ್ ದೂರಿದ್ದಾರೆ.
“ಪ್ರಧಾನಿ ಕಾರ್ಯಾಲಯವನ್ನು ಬಳಸಿಕೊಂಡು ಭಾರತ ಸರಕಾರವು ರವಾನಿಸಿದೆ ಎಂದು ತೋರುವಂತೆ ಸಾರ್ವಜನಿಕರ ದುಡ್ಡಿನಲ್ಲಿ ಬಿಜೆಪಿಯು ಮೇಲಿನ ಪತ್ರವನ್ನು ಬಿಡುಗಡೆ ಮಾಡಿದೆ. ಇಂತಹ ಬೃಹತ್ ಸಂದೇಶದ ರವಾನೆಯು ಬಿಜೆಪಿ ಮತ್ತು ಪ್ರಧಾನಿ ಮೋದಿ ಪರವಾಗಿನ ಮನವಿಯಲ್ಲದೆ ಮತ್ತೇನಲ್ಲ ಹಾಗೂ ಆ ಮೂಲಕ ಭಾರತೀಯ ಚುನಾವಣಾ ಆಯೋಗದ ಕಡ್ಡಾಯ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ” ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಸಾರ್ವಜನಿಕರ ಹಣದಲ್ಲಿ ಪ್ರಚಾರ ನಡೆಸಬಾರದು ಹಾಗೂ ಪತ್ರವನ್ನು ಹಿಂಪಡೆಯಬೇಕು ಎಂದು ಬಿಜೆಪಿ ಹಾಗೂ ಅದರ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.