ನಿಯಮಗಳ ಉಲ್ಲಂಘನೆ: ಅದಾನಿ ಸಮೂಹದ 6 ಕಂಪನಿಗಳಿಗೆ ಸೆಬಿ ನೋಟಿಸ್
PC : NDTV
ಹೊಸದಿಲ್ಲಿ: ಅದಾನಿ ಸಮೂಹದ ಆರು ಕಂಪೆನಿಗಳು ಸಂಬಂಧಿತ ಸಂಸ್ಥೆಗಳೊಂದಿಗಿನ ವಹಿವಾಟುಗಳಲ್ಲಿ ನಡೆಸಿವೆಯೆನ್ನಲಾದ ಉಲ್ಲಂಘನೆಗಳಿಗೆ ಹಾಗೂ ಲಿಸ್ಟಿಂಗ್ ನಿಬಂಧನೆಗಳನ್ನು ಅನುಸರಿಸದೇ ಇರುವುದಕ್ಕೆ ಸೆಕ್ಯುರಿಟೀಸ್ ಎಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶೋಕಾಸ್ ನೋಟಿಸ್ ಜಾರಿಗೊಳಿಸಿದೆ
ಎರಡು ಶೋಕಾಸ್ ನೋಟಿಸ್ಗಳನ್ನು ಪಡೆದಿರುವ ಕುರಿತು ಸಮೂಹದ ಪ್ರಮುಖ ಕಂಪೆನಿಯಾಗಿರುವ ಅದಾನಿ ಎಂಟರ್ಪ್ರೈಸಸ್ ಮಾರ್ಚ್ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಸೆಬಿಗೆ ಮಾಡಲಾಗಿರುವ ರೆಗ್ಯುಲೇಟರಿ ಫೈಲಿಂಗ್ಸ್ನಲ್ಲಿ ತಿಳಿಸಿದೆ.
ಅದಾನಿ ಪೋರ್ಟ್ಸ್ ಎಂಡ್ ಸ್ಪೆಷಲ್ ಇಕನಾಮಿಕ್ ಝೋನ್,ಅದಾನಿ ಪವರ್, ಅದಾನಿ ಎನರ್ಜಿ ಸೊಲ್ಯೂಶನ್ಸ್, ಅದಾನಿ ವಿಲ್ಮಾರ್ ಮತ್ತು ಅದಾನಿ ಟೋಟಲ್ ಗ್ಯಾಸ್ ಕೂಡ ಈ ಕುರಿತು ಮಾಹಿತಿ ನೀಡಿವೆ.
ಆದರೆ ಸೆಬಿ ನೀಡಿರುವ ನೋಟಿಸ್ಗಳು ಸಂಸ್ಥೆಗಳನ್ನು ಕನಿಷ್ಠ ಬಾಧಿಸಬಹುದು ಎಂದು ಕಾನೂನು ತಂಡ ಹೇಳಿವೆಯಾದರೂ ಸೆಬಿ ತನಿಖೆಗಳು ಸಂಸ್ಥೆಗಳ ಭವಿಷ್ಯದ ಹಣಕಾಸು ಸ್ಟೇಟ್ಮೆಂಟ್ಗಳನ್ನು ಬಾಧಿಸಬಹುದೆಂಬ ಭೀತಿಯಿದೆ.
ಅಮೆರಿಕಾದ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆಯ ತನಿಖಾ ವರದಿಯ ನಂತರ ಸೆಬಿ ಈ ಕುರಿತು ಪರಿಶೀಲಿಸಿದ್ದು ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಸಮೂಹದ 13 ನಿರ್ದಿಷ್ಟ ವಿತ್ತೀಯ ವಹಿವಾಟುಗಳನ್ನು ಗುರುತಿಸಿತ್ತು.
ಹಿಂಡೆನ್ಬರ್ಗ್ ವರದಿಯು ಅದಾನಿ ಸಮೂಹದ ಸುಮಾರು 6000ಕ್ಕೂ ಅಧಿಕ ಹಣಕಾಸು ವಹಿವಾಟುಗಳ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು.