ಶಾಂತಿ ಮಾತುಕತೆ ನಡೆದ 24 ಗಂಟೆಗಳ ಬಳಿಕ ಮಣಿಪುರದಲ್ಲಿ ಮತ್ತೆ ಹಿಂಸಾಚಾರ
ಸಾಂದರ್ಭಿಕ ಚಿತ್ರ
ಇಂಫಾಲ: ಜಿರಿಬಾಮ್ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪನೆಗೆ ಮೈತೈ ಹಾಗೂ ಹ್ಮಾರ್ ಸಮುದಾಯಗಳ ನಡುವೆ ಒಪ್ಪಂದವಾಗಿ 24 ಗಂಟೆಗಳು ಕಳೆಯುವುದರೊಳಗೆ ಜಿರಿಬಾಮ್ ನಲ್ಲಿ ಮತ್ತೆ ಸಂಘರ್ಷ ಸ್ಫೋಟಗೊಂಡಿದ್ದು, ಗುಂಡಿನ ದಾಳಿ ಹಾಗೂ ಯಾರೂ ಇಲ್ಲದ ಮನೆಗೆ ಬೆಂಕಿ ಹಚ್ಚಿರುವ ಘಟನೆಗಳು ವರದಿಯಾಗಿವೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಲಾಲ್ಪಾನಿ ಜಿಲ್ಲೆಯಲ್ಲಿನ ಯಾರೂ ಇಲ್ಲದ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ.
“ಇದು ಮೈತೈ ಸಮುದಾಯದ ನಿವಾಸಿಗಳು ವಾಸಿಸುತ್ತಿದ್ದ ಮನೆಗಳಿದ್ದ ಕಾಲನಿಯಾಗಿದ್ದು, ಜಿಲ್ಲೆಯಲ್ಲಿ ಹಿಂಸಾಚಾರ ಸ್ಫೋಟಗೊಂಡ ನಂತರ, ಬಹುತೇಕ ಮಂದಿ ತಮ್ಮ ಮನೆಗಳನ್ನು ತೊರೆದು ಹೋಗಿದ್ದರು. ಈ ಪ್ರದೇಶದಲ್ಲಿನ ಭದ್ರತಾ ವೈಫಲ್ಯದ ಲಾಭವನ್ನು ಪಡೆದು, ಅಪರಾಧ ಕೃತ್ಯ ಎಸಗಲು ದುಷ್ಕರ್ಮಿಗಳು ಬಳಸಿಕೊಂಡಿದ್ದು, ಅವರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಮವನ್ನು ಗುರಿಯಾಗಿಸಿಕೊಂಡು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಲವು ಸುತ್ತಿನ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ಧಾವಿಸಿವೆ ಎಂದೂ ಅವರು ತಿಳಿಸಿದ್ದಾರೆ.
ಗುರುವಾರ ಅಸ್ಸಾಂನ ಕಚ್ಚಾರ್ ಗೆ ಹೊಂದಿಕೊಂಡಂತಿರುವ CRPF ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಮೈತೈ ಹಾಗೂ ಹ್ಮಾರ್ ಸಮುದಾಯದ ಪ್ರತಿನಿಧಿಗಳು ಒಪ್ಪಂದವೊಂದಕ್ಕೆ ಬಂದಿದ್ದರು.
ಈ ಸಭೆಯನ್ನು ಜಿರಿಬಾಮ್ ಜಿಲ್ಲಾಡಳಿತ, ಅಸ್ಸಾಂ ರೈಫಲ್ಸ್ ಹಾಗೂ CRPF ಸಿಬ್ಬಂದಿಗಳು ಆಯೋಜಿಸಿದ್ದರು. ಈ ಸಭೆಯಲ್ಲಿ ತಡೌ, ಪೈತೆ ಹಾಗೂ ಮಿಝೊ ಸಮುದಾಯದ ಪ್ರತಿನಿಧಿಗಳೂ ಉಪಸ್ಥಿತರಿದ್ದರು.
ಮುಂದಿನ ಸಭೆ ಆಗಸ್ಟ್ 15ರಂದು ನಡೆಯಲಿದೆ.