ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಶಿಬಿರಗಳಿಗೆ ಧಾವಿಸಿದ ಜನರು
(PTI/Photo
ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಹೊಸದಾಗಿ ಹಿಂಸಾಚಾರ ಕಾಣಿಸಿಕೊಂಡಿದೆ. ಬಿಷ್ಣುಪುರದ ಮೊಯಿರಂಗ್ನಲ್ಲಿ ಎರಡು ಸಮುದಾಯಗಳು ಬಂದೂಕು ಹಿಡಿದುಕೊಂಡು ಘರ್ಷಣೆ ನಡೆಸಿದವು ಎಂದು ವರದಿಯಾಗಿದೆ.
ಬುಧವಾರ ರಾತ್ರಿಯೂ ಗುಂಡು ಹಾರಾಟದ ಸದ್ದು ಕೇಳಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹಿಂಸಾಚಾರದ ವೇಳೆ, ಹಲವು ಮನೆಗಳಿಗೆ ಬೆಂಕಿ ಕೊಡಲಾಗಿದೆ ಎಂದು ಹೇಳಲಾಗಿದೆ. ಬಂದೂಕು ಕದನ ನಡೆದ ಸ್ಥಳದ ಸಮೀಪ ವಾಸಿಸುತ್ತಿದ್ದ ಹಲವಾರು ಗ್ರಾಮಸ್ಥರು ಸಮೀಪದ ಶಿಬಿರಕ್ಕೆ ಧಾವಿಸಿದರು.
‘‘ನಿನ್ನೆ ರಾತ್ರಿಯಿಂದಲೂ ಗುಂಡಿನ ಕಾಳಗ ನಡೆಯುತ್ತಿದೆ. ನಾವು ರಾತ್ರಿಯಿಡೀ ಮಲಗಲಿಲ್ಲ. ನಾವು ಏನೂ ತಿನ್ನಲಿಲ್ಲ’’ ಎಂದು ಸ್ಥಳೀಯರೊಬ್ಬರು ‘ಇಂಡಿಯ ಟುಡೇ’ಗೆ ತಿಳಿಸಿದರು. ನಿರಂತರ ಬಂದೂಕು ಕಾಳಗದಿಂದಾಗಿ ಗ್ರಾಮಸ್ಥರು ಹೆದರಿದ್ದಾರೆ ಎಂದು ಇನ್ನೋರ್ವ ಗ್ರಾಮಸ್ಥರು ಹೇಳಿದರು.
ಬುಧವಾರ, ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಜನರ ಗುಂಪೊಂದು, ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸಿದ ಎರಡು ಬಸ್ಗಳನ್ನು ಸುಟ್ಟು ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಸುಮಾರು ಮೂರು ತಿಂಗಳ ಹಿಂದೆ ಮಣಿಪುರದಲ್ಲಿ ಆರಂಭಗೊಂಡಿರುವ ಜನಾಂಗೀಯ ಹಿಂಸೆಗೆ ಈವರೆಗೆ ಸರಕಾರಿ ಅಂಕಿಸಂಖ್ಯೆಗಳ ಪ್ರಕಾರ 160ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.