ಮಣಿಪುರದಲ್ಲಿ ಮತ್ತೆ ಹಿಂಸೆ; ದುಷ್ಕರ್ಮಿಗಳ ಗುಂಡಿನ ದಾಳಿಗೆ ಪೊಲೀಸ್ ಸಹಿತ ಮೂವರು ಬಲಿ
ಹತ್ಯೆ ವಿರುದ್ಧ ಇಂಫಾಲದಲ್ಲಿ ಪ್ರತಿಭಟನೆ; ಪೊಲೀಸರು, ಪ್ರತಿಭಟನಕಾರರ ನಡುವೆ ಘರ್ಷಣೆ
Photo : PTI
ಇಂಫಾಲ: ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಶನಿವಾರ ಮತ್ತೆ ಗುಂಡಿನ ಕಾಳಗ ನಡೆದಿದ್ದು, ಓರ್ವ ಪೊಲೀಸ್ ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಶಸ್ತ್ರಧಾರಿ ದುಷ್ಕರ್ಮಿಗಳು ಹಾಗೂ ಭದ್ರತಾಪಡೆಗಳ ನಡುವೆ ನಡೆದ ಗುಂಡಿನ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿರುವ ಜೊತೆಗೆ ಹಲವರಿಗೂ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಗ್ರಾಮದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಲೆಂಗ್ಲಾಂ ಡಿಮ್ಗೆಲ್ ರನ್ನು ದುಷ್ಕರ್ಮಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಗುಂಡೆಸೆತಕ್ಕೆ ಬಲಿಯಾದವರಲ್ಲಿ ಇಬ್ಬರು ಮೈತಿಸಮುದಾಯದ ಸದಸ್ಯರೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈ ಗ್ರಾಮವು ಬೆಟ್ಟಪ್ರದೇಶದಲ್ಲಿದ್ದು ಕುಕಿ ಸಮುದಾಯದ ಪ್ರಾಬಲ್ಯವನ್ನು ಹೊಂದಿದೆ. ಹಿಂಸಾಚಾರವು ಪೂರ್ವಯೋಜಿತವೆಂಬ ಮಾಹಿತಿ ಭದ್ರತಾಪಡೆಗಳಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಂಗ್ಪೊಕ್ಪಿ ಜಿಲ್ಲೆಯಲ್ಲಿ ಹತ್ಯೆಗಳು ನಡೆದ ಬೆನ್ನಲ್ಲೇ ರಾಜಧಾನಿ ಇಂಫಾಲದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದೆ. ಮಹಿಳಾ ಹೋರಾಟಗಾರರು ಹಾಗೂ ಮಣಿಪುರ ಪೊಲೀಸರ ನಡುವೆ ಇಂಫಾಲದಲ್ಲಿ ಘರ್ಷಣೆ ಭುಗಿಲೆದ್ದಿರುವುದಾಗಿ ಇಂಫಾಲ್ ಫ್ರಿಪ್ರೆಸ್ ಸುದ್ದಿವಾಹಿನಿ ವರದಿ ಮಾಡಿದೆ.