ಭಾರತದಲ್ಲಿ ಕ್ರೈಸ್ತರ ವಿರುದ್ಧ ಹೆಚ್ಚಿದ ಹಿಂಸಾಚಾರ: ವರದಿಯಾದ 673 ಘಟನೆಗಳ ಪೈಕಿ ಕೇವಲ 47ರಲ್ಲಿ ಎಫ್ಐಆರ್ ದಾಖಲು
ಯುಸಿಎಫ್ ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತದಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರ ಹೆಚ್ಚಿದ್ದು, 2024 ಅಕ್ಟೋಬರ್ ಅಂತ್ಯದ ವೇಳೆಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಮ್(ಯುಸಿಎಫ್)ನ ಸಹಾಯವಾಣಿಯಲ್ಲಿ 673 ಘಟನೆಗಳು ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು(182) ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಛತ್ತೀಸ್ಗಡ (139) ನಂತರದ ಸ್ಥಾನದಲ್ಲಿದೆ.
ಯುಸಿಎಫ್ ದಿಲ್ಲಿ ಮೂಲದ ನಾಗರಿಕ ಸಮಾಜ ಸಂಘಟನೆಯಾಗಿದ್ದು, ಕ್ರೈಸ್ತರ ಸಮಸ್ಯೆಗಳನ್ನು ಕೇಂದ್ರೀಕರಿಸಿದೆ. ಅದರ ‘ಹಿಂಸಾಚಾರ ನಿಗಾ ವರದಿ 2024’ರ ಪ್ರಕಾರ ಒಟ್ಟು 673 ಹಿಂಸಾಚಾರದ ಘಟನೆಗಳ ಪೈಕಿ ಕೇವಲ 47ರಲ್ಲಿ ಎಫ್ಐಆರ್ಗಳು ದಾಖಲಾಗಿವೆ.
maktoobmedia.com ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯುಸಿಎಫ್ನ ರಾಷ್ಟ್ರೀಯ ಸಂಯೋಜಕ ಎ.ಸಿ.ಮೈಕೆಲ್ ಅವರು,‘ಭಾರತದಲ್ಲಿ ಕ್ರೈಸ್ತರಿಗೆ ತಮ್ಮ ಧರ್ಮವನ್ನು ಪಾಲಿಸುವುದು ಕಷ್ಟಕರವಾಗಿದೆ. ದೇಶಾದ್ಯಂತ ಕೈಸ್ತರ ವಿರುದ್ಧ ಹಿಂಸಾಚಾರ ಹೆಚ್ಚಾಗಿದೆ. 2014ರಲ್ಲಿ ಕೈಸ್ತರ ವಿರುದ್ಧ ಹಿಂಸಾಚಾರದ ಘಟನೆಗಳ ಸಂಖ್ಯೆ ನೂರಕ್ಕೂ ಕಡಿಮೆಯಿತ್ತು. 2018ರಲ್ಲಿ ಅದು 292ಕ್ಕೇರಿದ್ದು,ಆಗಿನಿಂದ ಪ್ರತಿವರ್ಷವೂ ಇಂತಹ ಘಟನೆಗಳು ಹೆಚ್ಚುತ್ತಲೇ ಇವೆ. ಕಳೆದ ವರ್ಷ (2023)ರಲ್ಲಿ ನಾವು ಸುಮಾರು 750 ಘಟನೆಗಳನ್ನು ದಾಖಲಿಸಿಕೊಂಂಡಿದ್ದೇವೆ,ಅಂದರೆ ನಮ್ಮ ದೇಶದಲ್ಲಿ ಪ್ರತಿ ದಿನ ಇಬ್ಬರು ಕೈಸ್ತರ ಮೇಲೆ ದಾಳಿಗಳು ನಡೆದಿವೆ’ ಎಂದು ಹೇಳಿದರು.
ಹಿಂಸಾಚಾರದ ಘಟನೆಗಳಲ್ಲಿ ದೈಹಿಕ ಹಿಂಸೆ,ಕೊಲೆ,ಲೈಂಗಿಕ ಹಿಂಸೆ,ಬೆದರಿಕೆ, ಸಾಮಾಜಿಕ ಬಹಿಷ್ಕಾರ,ಧಾರ್ಮಿಕ ಆಸ್ತಿಗಳಿಗೆ ಹಾನಿ,ಧಾರ್ಮಿಕ ಚಿಹ್ನೆಗಳ ಅಪವಿತ್ರಗೊಳಿಸುವಿಕೆ ಮತ್ತು ಪ್ರಾರ್ಥನಾ ಸೇವೆಗಳಿಗೆ ಅಡ್ಡಿಸೇರಿವೆ. ಭಾರತದ 28 ರಾಜ್ಯಗಳ ಪೈಕಿ 23ರಲ್ಲಿ ಕ್ರೈಸ್ತರು ವಿವಿಧ ಮಟ್ಟಗಳಲ್ಲಿ ಹಿಂಸಾಚಾರ ಮತ್ತು ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಯುಸಿಎಫ್ ಹೇಳಿದೆ.
ರಾಷ್ಟ್ರ ರಾಜಧಾನಿ ಮತ್ತು ದಿಲ್ಲಿ ಎನ್ಸಿಆರ್ ಕೂಡ ಕ್ರೈಸ್ತರ ವಿರುದ್ಧ ಹಿಂಸಾಚಾರದ ಘಟನೆಗಳಿಂದ ಮುಕ್ತವಾಗಿಲ್ಲ, ಅಕ್ಟೋಬರ್ ತಿಂಗಳೊಂದರಲ್ಲೇ ಅಲ್ಲಿ ನಾಲ್ಕು ಘಟನೆಗಳು ವರದಿಯಾಗಿವೆ.
ಇವು ಕ್ರಿಶ್ಚಿಯನ್ ಧರ್ಮವನ್ನು ಗುರಿಯಾಗಿಸಿಕೊಂಡಿರುವ ಗುಂಪುಗಳ ಸಂಘಟಿತ ಹಿಂಸಾಚಾರಗಳಾಗಿವೆ ಎಂದು ಹೇಳಿದ ಮೈಕೆಲ್, ಪೋಲಿಸರು ಎಫ್ಐಆರ್ಗಳನ್ನು ದಾಖಲಿಸಿಕೊಳ್ಳುವ ಬದಲು ಬಲಿಪಶುಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಪೋಲಿಸರು ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಬಲವಂತದ ಮತಾಂತರದ ಸುಳ್ಳು ಆರೋಪಗಳಲ್ಲಿ ಕ್ರೈಸ್ತ ಧರ್ಮಗುರುಗಳನ್ನು ಬಂಧಿಸುತ್ತಾರೆ ಎಂದು ಆರೋಪಿಸಿದರು.
ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು 2024ನೇ ಸಾಲಿಗೆ ಭಾರತ ಕುರಿತು ಅಪ್ಡೇಟ್ನಲ್ಲಿ,ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಡುತ್ತಿರುವುದು ಮುಂದುವರಿದಿದೆ ಎಂದು ಹೇಳಿದೆ.