ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ ಶಂಕಿತ ಉಗ್ರರಿಂದ ಗುಂಡಿನ ದಾಳಿ, ಬಾಂಬ್ ಎಸೆತ
ಸಾಂದರ್ಭಿಕ ಚಿತ್ರ.| Photo: PTI
ಇಂಫಾಲ: ಮಣಿಪುರದಲ್ಲಿ ಬುಧವಾರವೂ ಹಿಂಸಾಚಾರ ಮುಂದುವರಿದಿದೆ. ಕಂಗ್ಪೊಕ್ಪಿಯ ಗಡಿಯಲ್ಲಿರುವ ಇಂಫಾಲ ಪಶ್ಚಿಮ ಜಿಲ್ಲೆಯ ಗ್ರಾಮವೊಂದರಲ್ಲಿ ನಿಷೇಧಿತ ಉಗ್ರ ಸಂಘಟನೆಯ ಸದಸ್ಯರೆಂದು ಶಂಕಿಸಲಾದ ಅಪರಿಚಿತ ಬಂದೂಕುಧಾರಿಗಳು ಜನರ ಮೇಲೆ ದಾಳಿ ನಡೆಸಿದ್ದಾರೆ ಹಾಗೂ ಬಾಂಬ್ ಎಸೆದಿದ್ದಾರೆ.
ಶಸಸ್ತ್ರ ಉಗ್ರರು ಕೌಟ್ರುಕ್ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ ಹಾಗೂ ಕನಿಷ್ಠ 10 ಬಾಂಬ್ ಗಳನ್ನು ಎಸೆದಿದ್ದಾರೆ. ಆದರೆ, ಈ ಘಟನೆಗಳಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾಂಬ್ ದಾಳಿ ಗ್ರಾಮಸ್ಥರಲ್ಲಿ ಆಂತಕ ಉಂಟು ಮಾಡಿತು.
ಈ ಸಂದರ್ಭ ಇಲ್ಲಿ ನಿಯೋಜಿಸಲಾಗಿದ್ದ ಇಂಡಿಯನ್ ರಿಸರ್ವ್ ಬೆಟಾಲಿಯನ್ನ ಸಿಬ್ಬಂದಿ ಪ್ರತೀಕಾರವಾಗಿ ಗುಂಡಿನ ದಾಳಿ ನಡೆಸಿದರು ಎಂದು ಅವರು ಹೇಳಿದ್ದಾರೆ. ಕಂಗ್ಪೊಕ್ಪಿ ಜಿಲ್ಲೆಯ ಖರಮ್ ವೈಫೈ ಗ್ರಾಮದ ಸಮೀಪ ಮಂಗಳವಾರ ಬೆಳಗ್ಗೆ ನಿಷೇಧಿತ ಉಗ್ರರ ಗುಂಪಿನ ಸದಸ್ಯರೆಂದು ಶಂಕಿಸಲಾದ ಅಪರಿಚಿತ ಶಸಸ್ತ್ರ ವ್ಯಕ್ತಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದ ಮೂವರನ್ನು ಮಂಗಳವಾರ ಬೆಳಗ್ಗೆ ಗುಂಡು ಹಾರಿಸಿ ಹತ್ಯೆಗೈದ ಬಳಿಕ ಈ ಹಿಂಸಾಚಾರ ಆರಂಭವಾಗಿದೆ. ನಿನ್ನೆಯಷ್ಟೇ ಮೂರು ಜನರ ಹತ್ಯೆ ನಡೆದಿದ್ದು, ಇದರಿಂದ ಹೊಸ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಉದ್ವಿಗ್ನತೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲದಲ್ಲಿ ಅತಿ ಹೆಚ್ಚು ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ಕೌಟ್ರುಕ್ ಕೂಡ ಒಂದು. ಮೇ 3ರಂದು ಎರಡು ಗುಂಪುಗಳ ನಡುವೆ ಹಿಂಸಾಚಾರ ಭುಗಿಲೆದ್ದ ಬಳಿಕ, ಇದು ಹಲವು ಗುಂಡಿನ ಕಾಳಗದ ಘಟನೆಗಳಿಗೆ ಸಾಕ್ಷಿಯಾಗಿದೆ.