ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಲವು ಮನೆಗಳಿಗೆ ಬೆಂಕಿ, ಓರ್ವನ ಮೇಲೆ ಗುಂಡಿನ ದಾಳಿ
ಮಣಿಪುರ. | Photo : PTI
ಇಂಫಾಲ್: ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಶನಿವಾರ ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಗುಂಪೊಂದು 15 ಮನೆಗಳಿಗೆ ಬೆಂಕಿ ಹಚ್ಚಿದೆ. ಅಲ್ಲದೆ, ವ್ಯಕ್ತಿಯೋರ್ವನ ಕಾಲಿಗೆ ಗುಂಡು ಹಾರಿಸಿದೆ. ಈ ಘಟನೆ ಲಂಗೋಲ್ ಗೇಮ್ಸ್ ಗ್ರಾಮದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಹಾಗೂ ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಹಲವು ಸುತ್ತು ಅಶ್ರುವಾಯು ಸೆಲ್ಗಳನ್ನು ಸಿಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ 45 ವರ್ಷದ ವ್ಯಕ್ತಿಯೋರ್ವನ ಕಾಲಿಗೆ ಗುಂಡು ತಗುಲಿ ಗಾಯವಾಗಿದೆ. ಆತನನ್ನು ಇಂಫಾಲದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಆರ್ಐಎಂಎಸ್)ನಲ್ಲಿ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರವಿವಾರ ಬೆಳಗ್ಗೆ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಲಾಗಿದೆ. ಈ ನಡುವೆ ಇಂಫಾಲ್ ಪೂರ್ವ ಜಿಲ್ಲೆಯ ಚೆಕ್ಕೋನ್ ಪ್ರದೇಶದಲ್ಲಿ ಕೂಡ ಹಿಂಸಾಚಾರ ಭುಗಿಲೆದ್ದಿದೆ. ಇಲ್ಲಿನ ಅತಿ ದೊಡ್ಡ ವಾಣಿಜ್ಯ ಸಂಕೀರ್ಣಕ್ಕೆ ಬೆಂಕಿ ಹಚ್ಚಲಾಗಿದೆ. ಇದಲ್ಲದೆ, ಕಟ್ಟಡದ ಸಮೀಪದ ಮೂರು ಮನೆಗಳಿಗೆ ಕೂಡ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 27 ವಿಧಾನ ಸಭಾ ಕ್ಷೇತ್ರದ ಸಮನ್ವಯ ಸಮಿತಿ ಶನಿವಾರ ಕರೆ ನೀಡಿದ್ದ 24 ಗಂಟೆಗಳ ಸಾರ್ವತ್ರಿಕ ಮುಷ್ಕರದ ನಡುವೆ ಇಂಫಾಲ ಕಣಿವೆಯಲ್ಲಿ ಈ ಹಿಂಸಾಚಾರದ ಘಟನೆಗಳು ನಡೆದಿವೆ. ಈ ಮುಷ್ಕರದಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.