ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ: ʼಮನ್ ಕಿ ಬಾತ್ʼನಲ್ಲಿ ಯುವ ಮತದಾರರಿಗೆ ಪ್ರಧಾನಿ ಮೋದಿ ಕರೆ
ನರೇಂದ್ರ ಮೋದಿ ; Photo: X \ @narendramodi
ಹೊಸದಿಲ್ಲಿ: ಮೊದಲ ಬಾರಿಗೆ ಮತ ಚಲಾಯಿಸುವ ಯುವಜನತೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕರೆ ನೀಡಿದ್ದಾರೆ. ಪ್ರವಾಸೋದ್ಯಮ, ಸಾಮಾಜಿಕ ಕಾರಣ ಅಥವಾ ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂಥ ವಿಷಯಗಳ ಸೃಷ್ಟಿಯಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ.
ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಮನವಿ ಮಾಡಿಕೊಂಡ ಮೋದಿಯವರು, ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಒತ್ತಾಯಿಸಿದರು. 18ನೇ ಲೋಕಸಭೆ ಅವರ ನಿರೀಕ್ಷೆ ಮತ್ತು ಆಕಾಂಕ್ಷೆಗಳ ಸಂಕೇತ ಎಂದು ಅವರು ಬಣ್ಣಿಸಿದರು.
ಯುವಜನತೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲದೇ, ಈ ಅವಧಿಯಲ್ಲಿ ನಡೆಯುವ ಚರ್ಚೆ ಹಾಗೂ ಸಂವಾದಗಳ ಬಗ್ಗೆ ಮಾಹಿತಿ ಹೊಂದಿರಬೇಕು. ನೆನಪಿಡಿ, ನಿಮ್ಮ ಮೊದಲ ಮತ ದೇಶಕ್ಕಾಗಿ ಎಂದು ಅವರು ಒತ್ತಾಯಿಸಿದರು. ಪರಿಣಾಮ ಬೀರುವ ವ್ಯಕ್ತಿಗಳು ಮತ್ತು ಪ್ರಮುಖರು ಮೊದಲ ಬಾರಿಯ ಮತದಾರರಿಗೆ ಸ್ಫೂರ್ತಿಯಾಬೇಕು ಎಂದು ಆಶಿಸಿದರು.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿಸ್ತಿಗೆ ಅನುಸಾರವಾಗಿ ಮುಂದಿನ ಮೂರು ತಿಂಗಳ ಕಾಲ ಈ ಮಾಸಿಕ ರೇಡಿಯೊ ಭಾಷಣ ಇರುವುದಿಲ್ಲ ಎಂದು ಅವರು ರವಿವಾರ ಪ್ರಕಟಿಸಿದರು.