ಸರ್ವಾಧಿಕಾರ, ನಿರುದ್ಯೋಗವನ್ನು ಕೊನೆಗೊಳಿಸಲು ಮತ ಚಲಾಯಿಸಿದೆ: ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ | PTI
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಇಂದು ತಮ್ಮ ಮತ ಚಲಾಯಿಸಿದರು. ನಂತರ ಪ್ರತಿಕ್ರಿಯಿಸಿದ ಅವರು, ಸರ್ವಾಧಿಕಾರ, ನಿರುದ್ಯೋಗ ಹಾಗೂ ಹಣದುಬ್ಬರವನ್ನು ಅಂತ್ಯಗೊಳಿಸಲು ನನ್ನ ಮತ ಚಲಾಯಿಸಿದೆ ಎಂದು ಹೇಳಿದರು. ಇದೇ ವೇಳೆ ಎಲ್ಲರೂ ಮನೆಯಿಂದ ಹೊರ ಬಂದು ತಮ್ಮ ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು.
ತಮ್ಮ ಮತ ಚಲಾಯಿಸಿದ ನಂತರ ಮಾತನಾಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ನನ್ನ ತಂದೆ, ಪತ್ನಿ, ಮಕ್ಕಳು ಹಾಗೂ ನಾನು ಮತ ಚಲಾಯಿಸಿದೆವು. ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲದೆ ಇದ್ದುದರಿಂದ ಅವರಿಂದು ಮತ ಚಲಾಯಿಸಲು ಬಂದಿಲ್ಲ. ನಾನು ಸರ್ವಾಧಿಕಾರ, ನಿರುದ್ಯೋಗ ಹಾಗೂ ಹಣದುಬ್ಬರವನ್ನು ಅಂತ್ಯಗೊಳಿಸಲು ಮತ ಚಲಾಯಿಸಿದೆ. ಜನರು ಮನೆಯಿಂದ ಹೊರ ಬಂದು ಮತ ಚಲಾಯಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ” ಎಂದು ಕರೆ ನೀಡಿದರು.
ಅರವಿಂದ್ ಕೇಜ್ರಿವಾಲ್ ಅವರು ತಮ್ಮ ವೃದ್ಧ ತಂದೆಯನ್ನು ಮತಗಟ್ಟೆಗೆ ಕರೆದೊಯ್ಯಲು ನೆರವು ನೀಡುತ್ತಿರುವ ದೃಶ್ಯ ಕಂಡು ಬಂತು.
ಇದಕ್ಕೂ ಮುನ್ನ ಆಪ್ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್ ಹಾಗೂ ಕೈಲಾಶ್ ಗೆಹ್ಲೋಟ್ ಕೂಡಾ ತಮ್ಮ ಮತ ಚಲಾಯಿಸಿದರು.
ಚುನಾವಣಾ ಆಯೋಗದ ಇತ್ತೀಚಿನ ದತ್ತಾಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ. 8.94 ಮತದಾನವಾಗಿದೆ.
ಆರನೆ ಹಂತದ ಲೋಕಸಭಾ ಚುನಾವಣೆಯಾದ ಇಂದು ದಿಲ್ಲಿಯ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಏಕಕಾಲಕ್ಕೆ ಮತದಾನ ನಡೆಯುತ್ತಿದೆ.