ಮತದಾನದ ದಿನ ಪ್ರತಿಭಟನೆ | ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಪ್ರಕರಣ ದಾಖಲು
ಮೆಹಬೂಬಾ ಮುಫ್ತಿ | PTI
ಶ್ರೀನಗರ: ಮತದಾನದ ದಿನವಾದ ಮೇ 25ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ಧರಣಿ ಆಯೋಜಿಸಿದ್ದ ಆರೋಪದಲ್ಲಿ ಈ ಹಿಂದಿನ ರಾಜ್ಯವಾದ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿಯ ವರಿಷ್ಠೆ ಮೆಹಬೂಬಾ ಮುಫ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಚುನಾವಣಾಧಿಕಾರಿ ಸಲ್ಲಿಸಿದ ದೂರಿನ ಆಧಾರದಲ್ಲಿ ಮೆಹಬೂಬಾ ಮುಫ್ತಿ ಅವರ ವಿರುದ್ಧ ಮೇ 25ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೆಹಬೂಬಾ ಮುಫ್ತಿ ಅವರ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಪಿಡಿಪಿಯ ಕಾರ್ಯಕರ್ತರು ಈ ಪ್ರದೇಶದಲ್ಲಿ ಸೇರಿದ್ದರು. ಚುನಾವಣೆಗೆ ಮುನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾದ ಪಕ್ಷದ ಕಾರ್ಯಕರ್ತರನ್ನು ಬಿಡುಗಡೆಗೊಳಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪ್ರತಿಪಾದಿಸಿ ಚುನಾವಣಾಧಿಕಾರಿ ದೂರು ದಾಖಲಿಸಿದ ಬಳಿಕ ಬಿಜ್ಬೆಹರಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಚುನಾವಣೆಗೆ ಮುನ್ನ ಪೊಲೀಸರು ತನ್ನ ಏಜೆಂಟರು ಹಾಗೂ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೆಹಬೂಬಾ ಮುಫ್ತಿ ಅವರು ಮೇ 24ರಂದು ಆರೋಪಿಸಿದ್ದರು. ಅವರ ಬಿಡುಗಡೆಗೆ ಆಗ್ರಹಿಸಿ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾದ ಪಟ್ಟಣದಲ್ಲಿ ಮೇ 25ರಂದು ಅವರು ಧರಣಿ ನಡೆಸಿದ್ದರು.