ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್, ಸಿಪಿಐ(ಎಂ)ಗೆ ಮತ ನೀಡುವುದೆಂದರೆ ಬಿಜೆಪಿಗೆ ಬೆಂಬಲಿಸಿದಂತೆ: ಮಮತಾ ಬ್ಯಾನರ್ಜಿ
ಕೃಷ್ಣಾನಗರ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ)ಗೆ ಮತ ನೀಡುವುದು ಬಿಜೆಪಿಗೆ ಮತ ನೀಡುವುದಕ್ಕೆ ಸಮ ಎಂದು ರವಿವಾರ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೃಷ್ಣಾನಗರ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಮಹುವಾ ಮೊಯಿತ್ರಾ ಪರವಾಗಿ ಪ್ರಚಾರ ನಡೆಸಿದ ಮಮತಾ ಬ್ಯಾನರ್ಜಿ, “ನಾನು ಇಂಡಿಯಾ ಮೈತ್ರಿಕೂಟವನ್ನು ಸ್ಥಾಪಿಸಿದೆ” ಎಂದು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಉಲ್ಲೇಖಿಸಿ ಹೇಳಿದ್ದಾರೆ. “ನಾನೇ ಅದಕ್ಕೆ ನಾಮಕರಣವನ್ನೂ ಮಾಡಿದೆ” ಎಂದು ಹೇಳಿದ ಅವರು, ಚುನಾವಣೆಯ ನಂತರ ನಾನು ಅದರ ಕಡೆ ಗಮನಿಸುತ್ತೇನೆ ಎಂದಿದ್ದಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಯಾವುದೇ ಮೈತ್ರಿ ಇಲ್ಲ. ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಡುವೆ ಏರ್ಪಟ್ಟಿರುವ ಮೈತ್ರಿಯು ಪಿತೂರಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವುದೆಂದರೆ ಬಿಜೆಪಿಗೆ ಮತ ಚಲಾಯಿಸಿದಂತೆ. ಸಿಪಿಐ(ಎಂ)ಗೆ ಮತ ಚಲಾಯಿಸಿದರೂ, ಬಿಜೆಪಿಗೆ ಮತ ಚಲಾಯಿಸಿದಂತೆಯೆ” ಎಂದು ಎಚ್ಚರಿಸಿದ್ದಾರೆ.
ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾದೊಂದಿಗೆ ಟಿಎಂಸಿ ಭಾಗವಾಗಿದೆ ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯನ್ ಸ್ಪಷ್ಟಪಡಿಸಿದ್ದರೂ, ಮಮತಾ ಮಮತಾ ಬ್ಯಾನರ್ಜಿ ಮೇಲಿನಂತೆ ಹೇಳಿಕೆ ನೀಡಿದ್ದಾರೆ.