ರಾಮಮಂದಿರಕ್ಕೆ ಕಾಂಗ್ರೆಸ್ ಪಕ್ಷವು ʼಬಾಬ್ರಿ ಬೀಗʼ ಹಾಕದಿರಲು 400 ಸ್ಥಾನ ಬೇಕಿದೆ: ಪ್ರಧಾನಿ ಮೋದಿ
Photo: ndtv
ಧಾರ್ (ಮಧ್ಯಪ್ರದೇಶ): ಕಾಂಗ್ರೆಸ್ ಪಕ್ಷವು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ತರದಿರಲು, ಅಯೋಧ್ಯೆಯಲ್ಲಿನ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕದಿರಲು ನನಗೆ ಬಿಜೆಪಿ ನೇತೃತ್ವದ ಎನ್ಡಿಎಎ ಮೈತ್ರಿಕೂಟಕ್ಕೆ 400 ಸ್ಥಾನಗಳು ಬೇಕಿದೆ ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಸ್ಲಿಮರಿಗೆ ಮೀಸಲಾತಿ ಲಾಭ ನೀಡುವುದರ ಪರವಾಗಿದ್ದೇನೆ ಎಂಬ ಹೇಳಿಕೆ ನೀಡಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಇಂಡಿ ಮೈತ್ರಿಕೂಟಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಎಲ್ಲ ಮೀಸಲಾತಿಯನ್ನೂ ಕಸಿದುಕೊಂಡು, ತನ್ನ ಆಳವಾದ ಪಿತೂರಿಯ ಭಾಗವಾಗಿ ತನ್ನ ಮತ ಬ್ಯಾಂಕ್ ಗೆ ನೀಡುವುದು ಬೇಕಿದೆ ಎಂದು ಕಿಡಿ ಕಾರಿದ್ದಾರೆ.
ಮಧ್ಯಪ್ರದೇಶದ ಧಾರ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಅದರರ್ಥ ವಿರೋಧ ಪಕ್ಷಗಳು ಗುತ್ತಿಗೆಗಳನ್ನು ಧರ್ಮದ ಆಧಾರದಲ್ಲಿ ನೀಡಲಿವೆ ಎಂದೂ ಅವರು ದೂರಿದ್ದಾರೆ.
ಕ್ರೀಡೆಯಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಕುರಿತು ಕಾಂಗ್ರೆಸ್ ಮಾತನಾಡಿದೆ ಎಂದು ಪ್ರತಿಪಾದಿಸಿದ ಅವರು, ಕ್ರಿಕೆಟ್ ತಂಡದ ಆಟಗಾರರ ಆಯ್ಕೆಯು ಧರ್ಮದ ಆಧಾರದಲ್ಲಿ ನಡೆಯಲಿದೆಯೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಂವಿಧಾನ ರಚನೆಯಲ್ಲಿ ಪಂಡಿತ್ ನೆಹರೂಗೆ ಹೋಲಿಸಿದರೆ ಅಂಬೇಡ್ಕರ್ ಪಾತ್ರ ಕಿರಿದು ಎಂದು ಹೇಳುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ವಾಸ್ತವವೆಂದರೆ, ಕಾಂಗ್ರೆಸ್ ಪರಿವಾರವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಆಳವಾಗಿ ದ್ವೇಷಿಸುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.