ಸಿಎಂ ಹುದ್ದೆ ತೊರೆಯಲು ಸಿದ್ದ, ಆದರೆ ಆ ಹುದ್ದೆ ನನ್ನ ಬಿಡುತ್ತಿಲ್ಲ: ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್ (PTI)
ಜೈಪುರ: ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಸಚಿನ್ ಪೈಲಟ್ ಜೊತೆಗಿನ ಮುಸುಕಿನ ಗುದ್ದಾಟ ನಡೆಸಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಆ ಹುದ್ದೆಯು ನನ್ನನ್ನು ಹೋಗಲು ಬಿಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, “ಮಹಿಳಾ ಬೆಂಬಲಿಗರೊಬ್ಬರು ತಾನು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಬೇಕೆಂದು ಬಯಸುವುದಾಗಿ ಹೇಳಿದ್ದರು. ಅದಕ್ಕೆ ನಾನು, ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲು ಬಯಸುತ್ತೇನೆ, ಆದರೆ ಈ ಹುದ್ದೆಯು ನನ್ನನ್ನು ಹೋಗಲು ಬಿಡುತ್ತಿಲ್ಲ ಎಂದು ಹೇಳಿದೆ" ಎಂದು ಗೆಹ್ಲೋಟ್ ತಿಳಿಸಿದರು.
ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಈ ಜಗಳವು ಬಹುತೇಕ ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಹಂತಕ್ಕೆ ತಲುಪಿತ್ತಾದರೂ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಸರ್ಕಾರ ಉಳಿದುಕೊಂಡಿತ್ತು.
ತನ್ನಲ್ಲಿ ಏನಾದರೂ ಇರಬೇಕು, ಅದಕ್ಕಾಗಿಯೇ ಪಕ್ಷದ ಹೈಕಮಾಂಡ್ ತನ್ನನ್ನು ರಾಜ್ಯವನ್ನು ಮುನ್ನಡೆಸಲು ಮೂರು ಬಾರಿ ಆಯ್ಕೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಆದರೆ, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗುತ್ತದೆ ಎಂದು ಹೇಳಿದರು.