ಪಶ್ಚಿಮಬಂಗಾಳದಲ್ಲಿ ವಕ್ಫ್ ಕಾಯ್ದೆ ಜಾರಿಯಿಲ್ಲ: ಮಮತಾ ಭರವಸೆ

ಮಮತಾ ಬ್ಯಾನರ್ಜಿ | PC : PTI
ಕೋಲ್ಕತಾ: ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಪಶ್ಚಿಮಬಂಗಾಳದಲ್ಲಿ ಜಾರಿಗೊಳಿಸುವುದಿಲ್ಲವೆಂಬ ತನ್ನ ಭರವಸೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಪುನರುಚ್ಚರಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ನಡುವೆ ಅವರು ಈ ಆಶ್ವಾಸನೆ ನೀಡಿದ್ದಾರೆ.
ಈ ಕಾಯ್ದೆಯನ್ನು ಕೇಂದ್ರ ಸರಕಾರವು ರೂಪಿಸಿದೆ ಹಾಗೂ ಅದಕ್ಕೆ ಉತ್ತರವನ್ನು ಅದರಿಂದಲೇ ಕೇಳಬೇಕಾಗಿದೆಯೆಂದು ಅವರು ಹೇಳಿದ್ದಾರೆ.
‘‘ ದಯವಿಟ್ಟು ಶಾಂತಿ ಹಾಗೂ ಸಂಯಮದಿಂದ ಇರುವಂತೆ ನಾನು ಎಲ್ಲಾ ಧರ್ಮಗಳ ಜನತೆಗೆ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇನೆ. ಧರ್ಮದ ಹೆಸರಿನಲ್ಲಿ ಅಧಾರ್ಮಿಕವಾಗಿ ವರ್ತಿಸದಿರಿ. ಪ್ರತಿಯೊಂದು ಮಾನವ ಜೀವವೂ ಅಮೂಲ್ಯವಾದುದು. ರಾಜಕೀಯ ಲಾಭಕ್ಕಾಗಿ ಗಲಭೆಗಳನ್ನು ಪ್ರಚೋದಿಸದಿರಿ. ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿರುವವರು ಸಮಾಜಕ್ಕೆ ಕೆಡುಕು ಉಂಟು ಮಾಡುತ್ತಾರೆ’’ ಎಂದು ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ಮಾಡಿದ್ದಾರೆ.
ಹಲವಾರು ಮಂದಿಯ ಆಕ್ರೋಶಕ್ಕೆ ಕಾರಣವಾದ ಈ ಕಾನೂನನ್ನು ನಾವು (ಪ.ಬಂಗಾಳ ಸರಕಾರ) ರೂಪಿಸಿದ್ದಲ್ಲವೆಂದು ನೆನಪಿಡಿ. ಈ ಕಾಯ್ದೆಯನ್ನು ಕೇಂದ್ರ ಸರರಕಾರವು ರಚಿಸಿದೆ. ಆದುದರಿಂದ ನೀವು ಬಯಸಿರುವ ಉತ್ತರವನ್ನು ಕೇಂದ್ರ ಸರಕಾರದಿಂದ ಕೋರಬೇಕಾಗಿದೆ’’ ಎಂದು ಮುಖ್ಯಮಂತ್ರಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ ಈ ವಿಷಯದಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಈ ಕಾನೂನನ್ನು ಬೆಂಬಲಿಸುವುದಿಲ್ಲ ಹಾಗೂ ಅದು ನಮ್ಮ ರಾಜ್ಯದಲ್ಲಿ ಜಾರಿಯಾಗುವುದಿಲ್ಲ.’’ ಎಂದು ಆಕೆ ಹೇಳಿದ್ದಾರೆ. ಹೀಗಿರುವಾಗ ಯಾಕೆ ಈ ಗಲಭೆಗಳು ಎಂದು ಮಮತಾ ಪ್ರಶ್ನಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಲುತ್ತವೆ ಎಂದವರು ವಿಷಾದಿಸಿದರು.