ವಕ್ಫ್ ಕಾಯ್ದೆ ತಿರಸ್ಕಾರ | ಮಮತಾ, ಸ್ಟಾಲಿನ್, ಸಿದ್ಧರಾಮಯ್ಯಗೆ ಮೆಹಬೂಬಾ ಮುಫ್ತಿ ಕೃತಜ್ಞತೆ

ಮೆಹಬೂಬಾ ಮುಫ್ತಿ | PC : PTI
ರಾಂಚಿ: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಧೈರ್ಯಶಾಲಿ ಹಾಗೂ ತತ್ವಬದ್ಧ ನಿಲುವಿಗೆ ಪಶ್ಚಿಮಬಂಗಾಳ, ತಮಿಳುನಾಡು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಶನಿವಾರ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದಿನ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಮುಫ್ತಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಮುಫ್ತಿ ಅವರು ತನ್ನ ‘ಎಕ್ಸ್’ ಖಾತೆಯಲ್ಲಿ, ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಧೈರ್ಯ ಹಾಗೂ ತತ್ವಬದ್ಧ ನಿಲುವಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿ ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್ ಹಾಗೂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ದೇಶದ ಏಕೈಕ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಜಮ್ಮು ಹಾಗೂ ಕಾಶ್ಮೀರದ ನಿವಾಸಿಯಾಗಿ ನಾವು ಕರಾಳ ಹಾಗೂ ಸವಾಲಿನ ಸಂದರ್ಭದಲ್ಲಿ ನಿಮ್ಮ ಅಚಲ ನಿಲುವಿನಲ್ಲಿ ಸಾಂತ್ವನ ಹಾಗೂ ಸ್ಫೂರ್ತಿ ಕಾಣುತ್ತೇವೆ ಎಂದು ಮುಫ್ತಿ ಬರೆದಿದ್ದಾರೆ.
ಅವರು ಪತ್ರಗಳ ಪ್ರತಿಯನ್ನು ‘ಎಕ್ಸ್’ನ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಒಂದು ದಶಕದಿಂದ ಭಾರತದಲ್ಲಿ ಹೆಚ್ಚುತ್ತಿರುವ ಬಹುಸಂಖ್ಯಾತರ ಪರ ಚಿಂತನೆ ಇಲ್ಲಿನ ಬಹುತ್ವ ಹಾಗೂ ವೈವಿದ್ಯತೆಯ ನಿಲುವಿಗೆ ಬೆದರಿಕೆಯಾಗಿದೆ. ಇದನ್ನು ಹೆಚ್ಚಿನ ಪ್ರಜೆಗಳು ತಿರಸ್ಕರಿಸಿದ್ದಾರೆ. ದ್ವೇಷ ಹಾಗೂ ವಿಭಜನೆ ಪ್ರಚಾರ ಮಾಡುವವರು ಈಗ ಅಧಿಕಾರದಲ್ಲಿದ್ದಾರೆ. ಅವರು ನಮ್ಮ ಸಂವಿಧಾನ, ಸಂಸ್ಥೆಗಳು, ಜಾತ್ಯತೀತ ವ್ಯವಸ್ಥೆಯನ್ನು ಗುರಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಲ್ಪಸಂಖ್ಯಾತರು ಮುಖ್ಯವಾಗಿ ಮುಸ್ಲಿಮರು ಸಾಕಷ್ಟು ಸಂಕಷ್ಟವನ್ನು ಎದುರಿಸಿದ್ದಾರೆ. ಇತ್ತೀಚೆಗೆ ನೂತನ ವಕ್ಫ್ ಕಾಯ್ದೆಯ ನಿರಂಕುಶ ಅನುಷ್ಠಾನ ನಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಿದೆ ಎಂದು ಮುಫ್ತಿ ಅವರು ಪತ್ರದಲ್ಲಿ ಹೇಳಿದ್ದಾರೆ.