ಕೋಮು ಉದ್ವಿಗ್ನತೆ ಹೆಚ್ಚಿಸಲು ಬಿಜೆಪಿ ವಕ್ಫ್ ಮಸೂದೆಯನ್ನು ಬಳಸುತ್ತಿದೆ: ಪ್ರತಿಪಕ್ಷ
PTI Photo
ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ ವಕ್ಫ್(ತಿದ್ದುಪಡಿ) ಮಸೂದೆ,2025ನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದು,ಚರ್ಚೆಗಳ ಬಳಿಕ ಸದನವು ಅಂಗೀಕಾರ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಿದೆ.
ಲೋಕಸಭೆಯು 12 ಗಂಟೆಗಳ ಸುದೀರ್ಘ ಚರ್ಚೆಗಳ ಬಳಿಕ ಗುರುವಾರ ನಸುಕಿನಲ್ಲಿ ವಿವಾದಾತ್ಮಕ ವಕ್ಫ್ ಮಸೂದೆಯನ್ನು ಅಂಗೀಕರಿಸಿದೆ. ಮಸೂದೆಯು ಅಲ್ಪಸಂಖ್ಯಾತರಿಗೆ ಪ್ರಯೋಜನಕಾರಿ ಎಂದು ಆಡಳಿತಾರೂಢ ಎನ್ಡಿಎ ಸಮರ್ಥಿಸಿಕೊಂಡಿದ್ದರೆ, ಪ್ರತಿಪಕ್ಷವು ಅದು ಮುಸ್ಲಿಮ್ ವಿರೋಧಿ ಎಂದು ಬಣ್ಣಿಸಿದೆ.
ಗುರುವಾರ ರಾಜ್ಯಸಭೆಯಲ್ಲಿ ಮಸೂದೆಯ ಮೇಲೆ ಚರ್ಚೆಯನ್ನು ಆರಂಭಿಸಿದ ರಿಜಿಜು,ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನ ರಾಜ್ಯ ಸರಕಾರಗಳು,ಅಲ್ಪಸಂಖ್ಯಾತ ಆಯೋಗಗಳು ಮತ್ತು ವಕ್ಫ್ ಮಂಡಳಿಗಳೊಂದಿಗೆ ನಾವು ಸಮಾಲೋಚಿಸಿದ್ದೇವೆ. ಮಸೂದೆಯ ಪರಿಶೀಲನೆಗಾಗಿ ಲೋಕಸಭೆ ಮತ್ತು ರಾಜ್ಯಸಭೆಗಳ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಸಮಾಲೋಚನೆಗಳ ಬಗ್ಗೆ ಕೆಲ ಕಳವಳಗಳಿದ್ದರೂ ವ್ಯಾಪಕ ಚರ್ಚೆಗಳ ಬಳಿಕ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು.
ಭಾರತದಲ್ಲಿ ವಕ್ಫ್ ಆಸ್ತಿಗಳು ಅಪಾರ ಪ್ರಮಾಣದಲ್ಲಿವೆ ಎಂದು ಎತ್ತಿ ತೋರಿಸಿದ ರಿಜಿಜು, ಇಂದು 8.72 ಲಕ್ಷ ವಕ್ಫ್ ಆಸ್ತಿಗಳಿವೆ. 2006ರಲ್ಲಿ ಸಾಚಾರ್ ಸಮಿತಿಯು 4.9 ಲಕ್ಷ ವಕ್ಫ್ ಆಸ್ತಿಗಳಿಂದ 12,000 ಕೋಟಿ ರೂ.ಗಳ ಆದಾಯವನ್ನು ಅಂದಾಜಿಸಿತ್ತು. ಇಂದು ಈ ಆಸ್ತಿಗಳು ಗಳಿಸುತ್ತಿರುವ ಆದಾಯವನ್ನು ಯಾರಾದರೂ ಊಹಿಸಬಹುದು ಎಂದು ಹೇಳಿದರು.
ವಕ್ಫ್(ತಿದ್ದುಪಡಿ) ಮಸೂದೆಯನ್ನು ಬೆಂಬಲಿಸುವಂತೆ ಅವರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳನ್ನು ಆಗ್ರಹಿಸಿದರು.
ಪ್ರತಿಪಕ್ಷವು ಎತ್ತಿರುವ ಕಳವಳಗಳನ್ನು ಪರಿಹರಿಸಲು ಮುಂದಾದ ರಿಜಿಜು, ಮಸೂದೆಯು ಯಾವುದೇ ಧಾರ್ಮಿಕ ಗುಂಪನ್ನು ಗುರಿಯಾಗಿಸಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಎಂದು ಒತ್ತಿ ಹೇಳಿದರು. ಪ್ರಸ್ತಾವಿತ ತಿದ್ದುಪಡಿಗಳು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ, ಜೊತೆಗೆ ಬಾಧಿತ ಪಕ್ಷಗಳಿಗೆ ಕಾನೂನು ನೆರವನ್ನು ಖಚಿತಪಡಿಸುತ್ತವೆ ಎಂದು ಹೇಳಿದರು.
ಮಸೂದೆಗೆ ‘ಉಮೀದ್(ಏಕೀಕೃತ ವಕ್ಫ್ ನಿರ್ವಹಣೆ ಸಶಕ್ತೀಕರಣ,ದಕ್ಷತೆ ಮತ್ತು ಅಭಿವೃದ್ಧಿ) ಮಸೂದೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಪ್ರಕಟಿಸಿದ ರಿಜಿಜು,ವಕ್ಫ್ ಮಂಡಳಿಯು ವಕ್ಫ್ ಆಸ್ತಿಗಳ ಮೇಲೆ ನೇರ ನಿಯಂತ್ರಣದ ಬದಲು ಮೇಲ್ವಿಚಾರಣಾ ಪಾತ್ರವನ್ನು ಹೊಂದಿರಲಿದೆ ಪ್ರತಿಪಾದಿಸಿದರು. ಮಸೂದೆಯು ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದರು.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನೇತೃತ್ವದ ಪ್ರತಿಪಕ್ಷವು ಮಸೂದೆಯನ್ನು ಬಲವಾಗಿ ವಿರೋಧಿಸಿದ್ದು,ಅದು ಸರಕಾರವು ಐತಿಹಾಸಿಕ ಧಾರ್ಮಿಕ ಆಸ್ತಿಗಳ ಮೇಲೆ ಸರಕಾರವು ನಿಯಂತ್ರಣ ಹೊಂದಲು ಕಾರಣವಾಗಲಿದೆ ಎಂದು ಆರೋಪಿಸಿದೆ. ಭೂ ಮಾಲಿಕತ್ವದ ದೃಢೀಕರಣವನ್ನು ಅಗತ್ಯವಾಗಿಸುವ ನಿಬಂಧನೆಗಳು ವಕ್ಫ್ ಸಂಸ್ಥೆಗಳನ್ನು ಅವುಗಳ ಆಸ್ತಿಗಳಿಂದ ಹೊರಹಾಕಲು ಬಳಕೆಯಾಗಬಹುದು ಎಂದು ಪ್ರತಿಪಕ್ಷ ನಾಯಕರು ವಾದಿಸಿದರು. ಈ ನಡುವೆ ಹಿಂದಿನ ಸರಕಾರಗಳು ಬಗೆಹರಿಸದ ದೀರ್ಘಕಾಲೀನ ಆಡಳಿತ ಸಮಸ್ಯೆಗಳನ್ನು ಈ ಮಸೂದೆಯು ಪರಿಹರಿಸಲಿದೆ ಎಂದು ಒತ್ತಿ ಹೇಳಿದ ರಿಜಿಜು,ಅದನ್ನು ಬೆಂಬಲಿಸುವಂತೆ ಎಲ್ಲ ಪಕ್ಷಗಳನ್ನು ಆಗ್ರಹಿಸಿದರು.
ಮಸೂದೆಯು ಮುಸ್ಲಿಮ್ ವಿರೋಧಿಯಾಗಿದೆ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ಸೈಯದ್ ನಾಸೀರ್ ಹುಸೇನ್ ಅವರು,ಬಿಜೆಪಿಯು ಕೋಮು ಉದ್ವಿಗ್ನತೆಗಳನ್ನು ಹೆಚ್ಚಿಸಲು ಈ ಮಸೂದೆಯನ್ನು ಬಳಸುತ್ತಿದೆ ಎಂದು ಆರೋಪಿಸಿದರು. ಆಡಳಿತ ಪಕ್ಷವು ದೇಶವನ್ನು ದಾರಿ ತಪ್ಪಿಸುತ್ತಿದೆ ಮತ್ತು ಜಂಟಿ ಸಂಸದೀಯ ಸಮಿತಿಯಲ್ಲಿನ ಪ್ರತಿಪಕ್ಷ ಸದಸ್ಯರ ಯಾವುದೇ ಶಿಫಾರಸನ್ನು ಸೇರಿಸದೆ ಸಂಸತ್ತಿನ ಮೂಲಕ ಮಸೂದೆಯನ್ನು ಹೇರುತ್ತಿದೆ ಎಂದು ಆರೋಪಿಸಿದ ಅವರು,ಮಸೂದೆಯು ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಲು ಬಯಸಿದೆ ಎಂದು ವಾದಿಸಿದರು. ಸರಕಾರವು ವಕ್ಫ್ ಸಂಸ್ಥೆಗಳ ಮೇಲೆ ಕಣ್ಣಿಡಲು ಅಥವಾ ಅವುಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಲು ಬಯಸುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.
ವಕ್ಫ್ ಆಸ್ತಿಗಳ ಪುರಾವೆಗಳನ್ನು ಅಗತ್ಯವಾಗಿಸುವುದನ್ನು ಟೀಕಿಸಿದ ಅವರು, ದೇವಸ್ಥಾನಗಳು ಮತ್ತು ಗುರುದ್ವಾರಾಗಳಂತೆ ಪ್ರಾಚೀನ ಧಾರ್ಮಿಕ ತಾಣಗಳು ಬಳಕೆದಾರರಿಂದ ವಕ್ಫ್ ಆಗಿ ಅಸ್ತಿತ್ವದಲ್ಲಿವೆ ಎಂದರು. ಸರಕಾರವು ಇಂತಹ ಐತಿಹಾಸಿಕ ಸ್ಥಳಗಳಿಗೆ ಪುರಾವೆಗಳನ್ನು ಹೇಗೆ ನಿರೀಕ್ಷಿಸುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿಯು ಮಸೂದೆಯನ್ನು ಸಮರ್ಥಿಸಿಕೊಳ್ಳಲು ಕಳೆದ ಆರು ತಿಂಗಳುಗಳಿಂದ ತಪ್ಪು ಮಾಹಿತಿ ಅಭಿಯಾನವನ್ನು ನಡೆಸುತ್ತಿದೆ ಎಂದು ಆರೋಪಿಸಿದ ಹುಸೇನ್,ಆಡಳಿತಾರೂಢ ಪಕ್ಷವು ಮೊದಲು ಕೋಮು ಧ್ರುವೀಕರಣದಲ್ಲಿ ತೊಡಗುತ್ತದೆ ಮತ್ತು ನಂತರ ಪ್ರತಿಪಕ್ಷವು ಅದನ್ನು ಮಾಡುತ್ತದೆ ಎಂದು ಆರೋಪಿಸುತ್ತದೆ ಎಂದರು. ಚುನಾವಣಾ ಲಾಭಕ್ಕಾಗಿ ವಿವಾದಗಳನ್ನು ಸೃಷ್ಟಿಸಲು ಮತ್ತು ಗಲಭೆಗಳನ್ನು ಪ್ರಚೋದಿಸಲು ಸರಕಾರವು ನೆಪಗಳನ್ನು ಹುಡುಕುತ್ತಿದೆ ಎಂದು ಅವರು ಕುಟುಕಿದರು.
ಮುಸ್ಲಿಮ್ ಸಮುದಾಯವು ತನ್ನದೇ ಆದ ಸಂಸ್ಥೆಗಳನ್ನು ನಡೆಸುವುದರಲ್ಲಿ ಸರಕಾರಕ್ಕೆ ನಂಬಿಕೆಯಿಲ್ಲವೇ ಎಂದು ಪ್ರಶ್ನಿಸಿದ ಅವರು,ಇದು ಅನ್ಯಾಯದ ಶಾಸನವಾಗಿದೆ ಮತ್ತು ನಿರ್ದಿಷ್ಟವಾಗಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.