ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನದ ಮೇಲಿನ ನಿರ್ಲಜ್ಜ ದಾಳಿ: ಸೋನಿಯಾ ಗಾಂಧಿ

ಸೋನಿಯಾ ಗಾಂಧಿ (Photo: PTI)
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಸಂವಿಧಾನದ ಮೇಲಿನ ಲಜ್ಜೆಗೆಟ್ಟ ದಾಳಿ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದಾರೆ.
ಇದು ಸಮಾಜವನ್ನು "ಶಾಶ್ವತ ಧ್ರುವೀಕರಣ" ಸ್ಥಿತಿಯಲ್ಲಿಡುವ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿದೆ ಎಂದು ಅವರು ಹೇಳಿದರು.
ಲೋಕಸಭೆಯು ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಬಳಿಕ ಸಂವಿಧಾನ್ ಸದನದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆಯು ಸಂವಿಧಾನವನ್ನು ಬುಡಮೇಲುಗೊಳಿಸುವ ಮತ್ತೊಂದು ಯತ್ನ, ಇದನ್ನೂ ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
"ನಿನ್ನೆ, ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು, ಇಂದು ಅದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಮಸೂದೆಯನ್ನು ಬುಲ್ಡೋಜರ್ ಮೂಲಕ ರವಾನಿಸಲಾಗಿದೆ. ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಈ ಮಸೂದೆ ಸಂವಿಧಾನದ ಮೇಲೆಯೇ ನಡೆಸಿದ ಒಂದು ನಿರ್ಲಜ್ಜ ದಾಳಿಯಾಗಿದೆ. ನಮ್ಮ ಸಮಾಜವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿಡಲು ಬಿಜೆಪಿ ಉದ್ದೇಶಪೂರ್ವಕ ತಂತ್ರದ ಭಾಗವಾಗಿದೆ" ಎಂದು ಗಾಂಧಿ ಹೇಳಿದರು.
12 ಗಂಟೆಗಳ ದೀರ್ಘ ಚರ್ಚೆಯ ನಂತರ ಮಧ್ಯರಾತ್ರಿ ಹೊತ್ತಿಗೆ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು. ಮಸೂದೆ ಪರವಾಗಿ 288 ಮತ್ತು ವಿರುದ್ಧ 232 ಮತಗಳು ಬಿದ್ದವು. ಮಸೂದೆ ಗುರುವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.