ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸುವುದಾಗಿ ಹೇಳಿ ಉಲ್ಟಾ ಹೊಡೆದ ಬಿಜೆಡಿ !
Photo: PTI
ಹೊಸದಿಲ್ಲಿ: ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ(ಬಿಜೆಡಿ)ವು ವಕ್ಫ್(ತಿದ್ದುಪಡಿ) ಮಸೂದೆಯ ಬಗ್ಗೆ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಲೋಕಸಭೆಯಲ್ಲಿ ಮಸೂದೆ ಮಂಡನೆಗೆ ಮುನ್ನ ತಾನು ಅದನ್ನು ವಿರೋಧಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದ ಬಿಜೆಡಿ ರಾಜ್ಯಸಭೆಯಲ್ಲಿ ಮಸೂದೆಯ ಮೇಲೆ ಮತದಾನಕ್ಕೆ ಕೆಲವೇ ಸಮಯದ ಮೊದಲು ತನ್ನ ನಿಲುವನ್ನು ಬದಲಿಸಿದೆ.
ಈ ಸಲ ಪಕ್ಷದಿಂದ ಯಾವುದೇ ಸಚೇತಕಾಜ್ಞೆ ಇರುವುದಿಲ್ಲ ಎಂದು ಹಿರಿಯ ಬಿಜೆಡಿ ನಾಯಕ ಸಸ್ಮಿತ್ ಪಾತ್ರಾ ಎಕ್ಸ್ ನಲ್ಲಿ ಪ್ರಕಟಿಸಿದ್ದರು.
‘ಬಿಜು ಜನತಾ ದಳವು ಯಾವಾಗಲೂ ಎಲ್ಲ ಸಮುದಾಯಗಳ ಹಕ್ಕುಗಳನ್ನು ಖಾತರಿಪಡಿಸಿಕೊಂಡು ಜಾತ್ಯತೀತತೆ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಎತ್ತಿ ಹಿಡಿದಿದೆ. ವಕ್ಫ್(ತಿದ್ದುಪಡಿ) ಮಸೂದೆಯ ಬಗ್ಗೆ ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ವರ್ಗಗಳು ವ್ಯಕ್ತಪಡಿಸಿರುವ ಭಾವನೆಗಳಿಗೆ ನಾವು ಅತ್ಯಂತ ಗೌರವವನ್ನು ನೀಡುತ್ತೇವೆ’ ಎಂದು ಪೋಸ್ಟ್ ನಲ್ಲಿ ಬರೆದಿರುವ ಪಾತ್ರಾ, ‘ನಮ್ಮ ಪಕ್ಷವು ಈ ಅಭಿಪ್ರಾಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ಬಳಿಕ ಮಸೂದೆಯ ಮೇಲೆ ಮತದಾನ ನಡೆದರೆ ನ್ಯಾಯ, ಸಾಮರಸ್ಯ ಮತ್ತು ಎಲ್ಲ ಸಮುದಾಯಗಳ ಹಕ್ಕುಗಳ ಅತ್ಯುತ್ತಮ ಹಿತಾಸಕ್ತಿಯಲ್ಲಿ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತಗಳನ್ನು ಚಲಾಯಿಸುವ ಹೊಣೆಗಾರಿಕೆಯನ್ನು ರಾಜ್ಯಸಭೆಯಲ್ಲಿನ ನಮ್ಮ ಗೌರವಾನ್ವಿತ ಸದಸ್ಯರಿಗೆ ವಹಿಸಿದೆ. ಪಕ್ಷವು ಸಚೇತಕಾಜ್ಞೆಯನ್ನು ಹೊರಡಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
ಇದು ತಟಸ್ಥ ಪಕ್ಷವೊಂದು ಮಸೂದೆಯನ್ನು ವಿರೋಧಿಸುತ್ತಿರುವ ಪಕ್ಷಗಳಿಂದ ಪ್ರತ್ಯೇಕಗೊಂಡಿರುವ ಮೊದಲ ನಿದರ್ಶನವಾಗಿದೆ. ತಮಿಳುನಾಡಿನ ಎಐಎಡಿಎಂಕೆ ಮತ್ತು ವೈ.ಎಸ್.ಜಗನ್ಮೋಹನ ರೆಡ್ಡಿಯವರ ವೈಎಸ್ಆರ್ ಕಾಂಗ್ರೆಸ್ ತಮ್ಮ ಮಸೂದೆ ವಿರೋಧಿ ನಿಲುವಿಗೆ ದೃಢವಾಗಿ ಅಂಟಿಕೊಂಡಿವೆ.
ಬಿಜೆಡಿ ರಾಜ್ಯಸಭೆಯಲ್ಲಿ ಏಳು ಸದಸ್ಯರನ್ನು ಹೊಂದಿದೆ.
ಬಿಜೆಡಿಯು ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸಮಾನಾಂತರವನ್ನು ಕಾಯ್ದುಕೊಂಡಿದ್ದರೂ ಸಂಸತ್ತಿನಲ್ಲಿ ವಿವಾದಾತ್ಮಕ ಮಸೂದೆಗಳ ಸಂದರ್ಭಗಳಲ್ಲಿ ಬಿಜೆಪಿಗೆ ‘ವಿಷಯಾಧಾರಿತ ಬೆಂಬಲ’ ನೀಡುವುದಕ್ಕೆ ಹೆಸರಾಗಿದೆ. ಆದರೆ ಕಳೆದ ವರ್ಷದ ಸಾರ್ವತ್ರಿಕ ಮತ್ತು ಒಡಿಶಾ ವಿಧಾನಸಭಾ ಚುನಾವಣೆಗಳ ಬಳಿಕ ಪರಿಸ್ಥಿತಿ ಬದಲಾಗಿದೆ.
ಮೂರು ದಶಕಗಳ ಕಾಲ ಒಡಿಶಾವನ್ನು ಆಳಿದ್ದ ಬಿಜೆಡಿ ಬಿಜೆಪಿಯಿಂದ ಪದಚ್ಯುತಗೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿತ್ತು. ಇದರ ಬೆನ್ನಿಗೇ ಪಟ್ನಾಯಕ್, ಇನ್ನು ಮುಂದೆ ಬಿಜೆಪಿ ಸಂಸತ್ತಿನಲ್ಲಿ ತನ್ನ ಪಕ್ಷದ ಬೆಂಬಲವನ್ನು ನೆಚ್ಚಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದರು.