ನಾಳೆ ಲೋಕಸಭೆಯಲ್ಲಿ ವಕ್ಫ್ ವಿಧೇಯಕ ವರದಿ ಮಂಡನೆ

PC : PTI
ಹೊಸದಿಲ್ಲಿ: ವಕ್ಫ್ ( ತಿದ್ದುಪಡಿ) ವಿಧೇಯಕ 2024 ಕುರಿತ ಜಂಟಿ ವಕ್ಫ್ ಸಮಿತಿಯ ವರದಿಯು ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.
ವಕ್ಫ್ ತಿದ್ದುಪಡಿ ವಿಧೇಯಕದ ಕುರಿತಾದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾದ ಜಗದಂಬಿಕಾ ಪಾಲ್ ಹಾಗೂ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಅವರು ವರದಿಯನ್ನು ನಾಳೆ ಲೋಕಭೆಯಲ್ಲಿ ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ಮಂಡಿಸಲಿದ್ದಾರೆ. ಸಮಿತಿಗೆ ಸಲ್ಲಿಸಲಾದ ಪುರಾವೆಗಳ ದಾಖಲೆಗಳನ್ನು ಕೂಡಾ ಅವರು ಸದನದ ಮುಂದಿಡಲಿದ್ದಾರೆ.
ಈ ವರದಿಯನ್ನು ಜನವರಿ 30ರಂದು ಜಗದಂಬಿಕಾ ಪಾಲ್ ಅವರು ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರಿಗೆ ವರದಿಯನ್ನು ಹಸ್ತಾಂತರಿಸಿದ್ದರು.
ವಕ್ಫ್ (ತಿದ್ದುಪಡಿ) ವಿಧೇಯಕದ ಕರಡು ವರದಿಯನ್ನು ಜಂಟಿ ಸಂಸದೀಯ ಸಮಿತಿಯು ಜನವರಿ 29ರಂದು ಅಂಗೀಕರಿಸಿತ್ತು. ವರದಿಯ ಕುರಿತಂತೆ ತಮ್ಮ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಪ್ರತಿಪಕ್ಷ ನಾಯಕರು ಸಲ್ಲಿಸಿದ್ದರು.
*ವಿರೋಧದ ಟಿಪ್ಪಣಿಯನ್ನು ನನ್ನ ಅನುಮತಿ
ಇಲ್ಲದೆ ಕೈಬಿಡಲಾಗಿದೆ: ಸಮಿತಿ ಸದಸ್ಯ ಸೈಯದ್ ಹುಸೇನ್ ಆರೋಪ
ವಕ್ಫ್ ತಿದ್ದುಪಡಿ ವಿಧೇಯಕದ ಕುರಿತಾಗಿ ತನ್ನ ಭಿನ್ನಾಭಿಪ್ರಾಯದ ಟಿಪ್ಪಣಿಯ ಕೆಲವು ಭಾಗಗಳನ್ನು ತನ್ನ ಸಮ್ಮತಿಯಿಲ್ಲದೆ ತೆಗೆದುಹಾಕಲಾಗಿದೆಯೆಂದು ಲೋಕಸಭೆಯ ವಿಪಕ್ಷ ಸದಸ್ಯ ಹಾಗೂ ಸಮಿತಿ ಸದಸ್ಯ ಸೈಯದ್ ಹುಸೇನ್ ಆಪಾದಿಸಿದ್ದಾರೆ.
ಪ್ರತಿಪಕ್ಷದ ಧ್ವನಿಗಳನ್ನು ಅಡಗಿಸುವ ಪ್ರಯತ್ನ ಇದಾಗಿದೆಯಂದು ಹುಸೇನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ವಕ್ಫ್ (ತಿದ್ದುಪಡಿ) ವಿಧೇಯಕ, 2024 ಕುರಿತ ಜಂಟಿ ಸಮಿತಿಯು ಒಂದು ಪ್ರಹಸನವಾಗಿದೆ. ಇದೀಗ ಅವರು ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುವಂತಹ ಕೆಳಮಟ್ಟಕ್ಕೆ ಇಳಿದಿದ್ದಾರೆ. ಸರಕಾರ ಯಾಕೆ ಇಷ್ಟೊಂದು ಹೆದರಿದೆ? ನಮ್ಮನ್ನು ಮೌನವಾಗಿಸಲು ಯಾಕೆ ಯತ್ನಿಸಲಾಗುತ್ತಿದೆ ಎಂದವರು ಪ್ರಶ್ನಿಸಿದ್ದಾರೆ.