ವರದಿ ಬದಲಾಯಿಸಿದ ಆರೋಪ | ವಕ್ಫ್ ಸಮಿತಿ ಸಭೆ ತ್ಯಜಿಸಿದ ಪ್ರತಿಪಕ್ಷದ ಸದಸ್ಯರು

PC : ANI
ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ ಸಭೆ ಸೋಮವಾರ ನಡೆಯಿತು. ಆದರೆ, ದಿಲ್ಲಿ ವಕ್ಫ್ ಮಂಡಳಿಯ ವಿಷಯ ಮಂಡನೆ ವಿರೋಧಿಸಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.
ಸಮಿತಿಯ ಮುಂದೆ ಹಾಜರಾದ ದಿಲ್ಲಿ ವಕ್ಫ್ ಮಂಡಳಿ ಆಡಳಿತಾಧಿಕಾರಿ, ತಮ್ಮ ವಿಷಯ ಮಂಡನೆಯಲ್ಲಿ ದಿಲ್ಲಿ ಸರಕಾರದ ಗಮನಕ್ಕೆ ಬಾರದ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಪ್ರತಿಪಕ್ಷಗಳ ಸದಸ್ಯರು ಆರೋಪಿಸಿದರು.
ಆಪ್ ಸದಸ್ಯ ಸಂಜಯ್ ಸಿಂಗ್, ಡಿಎಂಕೆಯ ಮುಹಮ್ಮದ್ ಅಬ್ದುಲ್ಲಾ, ಕಾಂಗ್ರೆಸ್ ನ ನಸೀರ್ ಹುಸೈನ್, ಮುಹಮ್ಮದ್ ಜಾವೇದ್ ಹಾಗೂ ಇತರರು ಸಭಾ ತ್ಯಾಗ ಮಾಡಿದರು.
ವಕ್ಫ್ ಮಂಡಳಿಯ ಆರಂಭಿಕ ವರದಿಯನ್ನು ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ನ ಆಯುಕ್ತ ಹಾಗೂ ದಿಲ್ಲಿ ವಕ್ಫ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವಿನಿ ಕುಮಾರ್ ಅವರು ಸಂಪೂರ್ಣವಾಗಿ ತಿರುಚಿದ್ದಾರೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು. ಅಲ್ಲದೆ, ಈ ಬದಲಾವಣೆಗೆ ಮುಖ್ಯಮಂತ್ರಿ ಅವರ ಅನುಮತಿ ಪಡೆದಿಲ್ಲ ಎಂದು ಅವರು ಹೇಳಿದರು.
ಸ್ವಲ್ಪ ಸಮಯದ ಬಳಿಕ ಪ್ರತಿಪಕ್ಷದ ಸದಸ್ಯರು ಹಿಂದಿರುಗಿದರು ಹಾಗೂ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಪಾಲ್ಗೊಂಡರು.
ವಕ್ಫ್ ತಿದ್ದುಪಡಿ ಕಾಯ್ದೆ, 2024ರ ಕುರಿತು ತಮ್ಮ ಮೌಖಿಕ ಪುರಾವೆಗಳನ್ನು ದಾಖಲಿಸಿಕೊಳ್ಳಲು ದಿಲ್ಲಿ ವಕ್ಫ್ ಮಂಡಳಿ, ಹರ್ಯಾಣ ವಕ್ಫ್ ಮಂಡಳಿ, ಪಂಜಾಬ್ ವಕ್ಫ್ ಮಂಡಳಿ ಹಾಗೂ ಉತ್ತರಾಖಂಡ ವಕ್ಫ್ ಮಂಡಳಿಯ ಪ್ರತಿನಿಧಿಗಳನ್ನು ಜಂಟಿ ಸಂಸದೀಯ ಸಮಿತಿ ಸೋಮವಾರ ಸಭೆಗೆ ಆಹ್ವಾನಿಸಿತ್ತು.