ಪೆರಿಯಾರ್, ಸಾಮಾಜಿಕ ನ್ಯಾಯ ಹಾಗೂ ಆರೆಸ್ಸೆಸ್, ಮೋದಿ ವಿಚಾರಗಳ ನಡುವೆ ಯುದ್ಧ : ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ತಿರುನೆಲ್ವೆಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ ತಮಿಳುನಾಡಿನಲ್ಲಿ ತನ್ನ ಮೊದಲ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ದೇಶದ ಇತರ ಭಾಗದ ನಡುವೆ ಸೈದ್ಧಾಂತಿಕ ಹಣಾಹಣಿಗೆ ಅವರು ಒತ್ತು ನೀಡಿದರು.
ಇಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು,ಪೆರಿಯಾರ್ ಸಿದ್ಧಾಂತಗಳು ಮತ್ತು ಸಾಮಾಜಿಕ ನ್ಯಾಯ ಹಾಗೂ ಆರೆಸ್ಸೆಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರದ ಸಿದ್ಧಾಂತಗಳ ನಡುವೆ ಯುದ್ಧ ನಡೆಯುತ್ತಿದೆ ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಕಾಲೂರಲು ಬಿಜೆಪಿ ಹವಣಿಸುತ್ತಿರುವಾಗ ರಾಹುಲ್ ತಮಿಳು ಭಾಷೆಯ ಮೇಲಿನ ದಾಳಿಯು ತಮಿಳು ಜನರ ಮೇಲಿನ ದಾಳಿಯಾಗಿದೆ ಎಂದು ಹೇಳುವ ಮೂಲಕ ಭಾಷಾ ಚರ್ಚೆಯನ್ನು ಹುಟ್ಟು ಹಾಕಿದರು.‘ ಒಂದು ದೇಶ, ಓರ್ವ ನಾಯಕ ಮತ್ತು ಒಂದು ಭಾಷೆ ಎಂದು ಮೋದಿ ಹೇಳುತ್ತಾರೆ, ತಮಿಳು ಇತರ ಯಾವುದೇ ಭಾರತೀಯ ಭಾಷೆಗಿಂತ ಕಡಿಮೆಯಲ್ಲ. ದೇಶದಲ್ಲಿ ಹಲವಾರು ವಿಭಿನ್ನ ಭಾಷೆಗಳು ಮತ್ತು ಸಂಸ್ಕೃತಿಗಳಿವೆ ಹಾಗೂ ಎಲ್ಲವೂ ನಮಗೆ ಸಮಾನ ಮುಖ್ಯವಾಗಿವೆ ’ಎಂದರು.
ಮೋದಿ ಸರಕಾರದಿಂದ ರಾಜಕೀಯ ಅಸ್ತ್ರಗಳಾಗಿ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯ ವಿರುದ್ಧ ದಾಳಿ ನಡೆಸಿದ ರಾಹುಲ್ ಪ್ರತಿಪಕ್ಷಗಳ ನಾಯಕರು ಜೈಲುಪಾಲಾಗುತ್ತಿರುವ ವಿಷಯವನ್ನು ಇನ್ನಷ್ಟು ಕೆದಕಿದರು. ವಿರೋಧ ಪಕ್ಷಗಳ ನಾಯಕರಿಗೆ ಬೆದರಿಕೆ ಇದೆ ಎಂದರು.