ಕೊಚ್ಚಿ ಹಿನ್ನೀರಿಗೆ ಕಸ ಎಸೆದಿದ್ದ ಗಾಯಕ ಶ್ರೀಕುಮಾರ್ ಗೆ 25,000 ರೂ.ದಂಡ

Photo Courtesy: Facebook
ಕೊಚ್ಚಿ(ಕೇರಳ): ಕೊಚ್ಚಿ ಹಿನ್ನೀರಿನಲ್ಲಿ ಕಸವನ್ನು ಎಸೆದಿದ್ದಕ್ಕಾಗಿ ಖ್ಯಾತ ಹಿನ್ನೆಲೆ ಗಾಯಕ ಎಂ.ಜಿ.ಶ್ರೀಕುಮಾರ್ಗೆ ಸ್ಥಳೀಯ ಸಂಸ್ಥೆಯು 25,000 ರೂ.ಗಳ ದಂಡವನ್ನು ವಿಧಿಸಿದೆ.
ಮುಲವುಕಾಡು ಗ್ರಾಮ ಪಂಚಾಯತ್ ಶ್ರೀಕುಮಾರ್ಗೆ ನೋಟಿಸನ್ನು ಹೊರಡಿಸಿದ್ದು,15 ದಿನಗಳಲ್ಲಿ ದಂಡದ ಹಣವನ್ನು ಪಾವತಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
ಕೆಲವು ದಿನಗಳ ಹಿಂದೆ ಪಂಚಾಯತ್ ಪ್ರದೇಶದಲ್ಲಿರುವ ಶ್ರೀಕುಮಾರ್ ನಿವಾಸದಿಂದ ಕಸದ ಚೀಲವನ್ನು ಕೊಚ್ಚಿ ಹಿನ್ನೀರಿಗೆ ಎಸೆದಿದ್ದನ್ನು ತನ್ನ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದ ಪ್ರವಾಸಿಯೋರ್ವರು ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು ಮತ್ತು ಅದನ್ನು ಸ್ಥಳೀಯ ಸ್ವಯಂ ಆಡಳಿತ ಸಚಿವ ಎಂ.ಬಿ.ರಾಜೇಶ ಅವರಿಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರು ಕಸ ಎಸೆದಿರುವ ಬಗ್ಗೆ ದೂರನ್ನು ಪುರಾವೆ ಸಹಿತ ಸೂಚಿಸಿದ ವಾಟ್ಸ್ಆ್ಯಪ್ ಸಂಖ್ಯೆಗೆ ಸಲ್ಲಿಸುವಂತೆ ತಿಳಿಸಿದ್ದರು.
ದೂರು ಸ್ವೀಕರಿಸಿದ್ದ ಸ್ಥಳೀಯ ಸಂಸ್ಥೆಯ ನಿಯಂತ್ರಣ ಕೊಠಡಿಯು ಅದೇ ದಿನ ಸ್ಥಳವನ್ನು ಪರಿಶೀಲಿಸಿ ಘಟನೆಯನ್ನು ದೃಢ ಪಡಿಸುವಂತೆ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು ಎಂದು ಪಂಚಾಯತ್ ಮೂಲಗಳು ತಿಳಿಸಿದವು.
ಶ್ರೀಕುಮಾರ್ ಅವರ ಉತ್ತರವನ್ನು ಪರಿಶೀಲಿಸಿದ ಬಳಿಕ ಅಗತ್ಯವಾದರೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಪಂಚಾಯತ್ ನ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಆದರೆ ಶ್ರೀಕುಮಾರ್ ಈವರೆಗೆ ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.