ಯೂಟ್ಯೂಬ್ ವೀಡಿಯೊ ನೋಡಿ ಹೆರಿಗೆ ಮಾಡಲು ಹೋಗಿ ಹೆಂಡತಿ ಮಗುವಿನ ಪ್ರಾಣ ತೆಗೆದ ಗಂಡ!
ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಯುಟ್ಯೂಬ್ ವೀಡಿಯೊ ನೋಡಿ ಅಕ್ಯುಪಂಕ್ಚರ್ ವಿಧಾನದಿಂದ ಹೆಂಡತಿಗೆ ಹೆರಿಗೆ ಮಾಡಿಸಲು ಹೋದ ಗಂಡ, ಆಕೆಯ ಮತ್ತು ಗರ್ಭದಲ್ಲಿದ್ದ ಶಿಶುವಿನ ಸಾವಿಗೆ ಕಾರಣನಾದ ಘಟನೆ ಕೇರಳದಲ್ಲಿ ವರದಿಯಾಗಿದೆ ಎಂದು thenewsminute.com ವರದಿ ಮಾಡಿದೆ.
ಮಂಗಳವಾರ ಈ ಘಟನೆ ನಡೆದಿದ್ದು, 36 ವರ್ಷದ ಮಹಿಳೆ ಹಾಗೂ ಆಕೆಯ ಗರ್ಭದಲ್ಲಿರುವ ಶಿಶು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮೃತ ಮಹಿಳೆ ಸಮೀರಾ ಬೀವಿಯ ಗಂಡ ನಯಾಸ್ ಎಂಬಾತನನ್ನು ಪೊಲೀಶರು ಬಂಧಿಸಿದ್ದಾರೆ. ಮಹಿಳೆ ಕರಕ್ಕಮಂಡಪಂ ಮೂಲದವರು ಎನ್ನಲಾಗಿದೆ.
ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದು, ಕೊನೆಯ ಮಗು ಒಂದು ವರ್ಷದ ಹಿಂದೆ ಜನಿಸಿತ್ತು ಎನ್ನಲಾಗಿದೆ. ಸಮೀರಾ, ನಯಾಸ್ನ ಎರಡನೇ ಹೆಂಡತಿಯಾಗಿದ್ದರು. ನಯಾಸ್ನ ಮೊದಲ ಹೆಂಡತಿ ಹಾಗೂ ಅಕ್ಯುಪಂಕ್ಚರ್ ಕಲಿಯುತ್ತಿರುವ ಆಕೆಯ ಪುತ್ರಿ ಸಮೀರಾಳ ಹೆರಿಗೆಗೆ ನೆರವಾಗಲು ಮುಂದೆ ಬಂದಿದ್ದರೆನ್ನಲಾಗಿದೆ. ಫೆಬ್ರವರಿ 20ರಂದು ಅಪರಾಹ್ನ 3 ಗಂಟೆಗೆ ಸಮೀರಾಗೆ ಹೆರಿಗೆ ನೋವು ಆರಂಭಗೊಂಡಿತ್ತು. ಆದರೆ ಸಂಜೆ 5.30ರೊಳಗಾಗಿ ಆಕೆ ತೀವ್ರ ರಕ್ತಸ್ರಾವಕ್ಕೊಳಗಾದಾಗ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆ ವೇಳೆಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ತಿಳಿದು ಬಂದಿದೆ.
ಜನವರಿಯಲ್ಲಿಯೇ ದಂಪತಿಗೆ ಆಶಾ ಕಾರ್ಯಕರ್ತೆಯರ ಸಹಿತ ನೆರೆಹೊರೆಯವರು ಹೆಂಡತಿಯನ್ನು ವೈದ್ಯರಲ್ಲಿಗೆ ಹೋಗುವಂತೆ ಸೂಚಿಸಿದ್ದರೂ ನಯಾಸ್ ತಿರಸ್ಕರಿಸಿದ್ದ ಎನ್ನಲಾಗಿದೆ. ತನ್ನ ಪತ್ನಿಗೆ ಮನೆಯಲ್ಲಿಯೇ ಯೂಟ್ಯೂಬ್ ನೋಡಿ ಹೆರಿಗೆ ಮಾಡುವುದಾಗಿ ಹೇಳಿದ್ದ ಎಂದು ತಿಳಿದು ಬಂದಿದೆ.