ಸಂಸತ್ ಭವನ ಕಟ್ಟಡದಲ್ಲಿ ನೀರು ಸೋರಿಕೆ: ಪ್ರಧಾನಿ ಮೋದಿಯನ್ನು ಅಣಕಿಸಿ ವಿಡಿಯೊ ಪೋಸ್ಟ್ ಮಾಡಿದ ಕಾಂಗ್ರೆಸ್
PC : X
ಹೊಸದಿಲ್ಲಿ: ಬುಧವಾರ ದಿಲ್ಲಿಯ ಕೆಲ ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಸತ್ ಭವನದ ಕಟ್ಟಡದಲ್ಲಿ ನೀರು ಸೋರಿಕೆಯಾದ ಬೆನ್ನಿಗೇ, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯನ್ನು ಅಣಕಿಸಿರುವ ಕಾಂಗ್ರೆಸ್, ವಿಡಿಯೊವೊಂದನ್ನು ಪೋಸ್ಟ್ ಮಾಡಿದೆ.
ಅನಿಮೇಷನ್ ವಿಡಿಯೊವೊಂದನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಸಂಸತ್ ಭವನದ ಕಟ್ಟಡವನ್ನು ನಿರ್ಮಿಸುವಾಗ ಡ್ರೋನ್ ಸುಸ್ಥಿತಿಯಲ್ಲಿರಲಿಲ್ಲ. ಇದು ನರೇಂದ್ರ ಮೋದಿಯವರ ತಪ್ಪಲ್ಲ” ಎಂಬ ಶೀರ್ಷಿಕೆಯನ್ನು ಆ ವಿಡಿಯೊಗೆ ನೀಡಿದೆ.
ಈ ವಿಡಿಯೊ ಹಿನ್ನೆಲೆಯಲ್ಲಿ “ನಾನು ಪರಿಶೀಲನೆಗಾಗಿ ಬರುತ್ತಿದ್ದೇನೆ ಎಂದು ಅವರಿಗೆ ಮಾಹಿತಿ ನೀಡುವುದು ಅನಿವಾರ್ಯವೇನಲ್ಲ” ಎಂದು ಮೋದಿ ದನಿಯಲ್ಲಿ ಹೇಳುತ್ತಿರುವುದು ಕೇಳಿ ಬರುತ್ತದೆ.
“ಇಲ್ಲವಾದರೆ, ಅವರು ಎಲ್ಲವೂ ಸುಸ್ಥಿತಿಯಲ್ಲಿರುವಂತೆ ಖಾತರಿ ಪಡಿಸುತ್ತಿದ್ದರು. ಆದರೆ, ಒಂದು ವೇಳೆ ನಾನೇದರೂ ಡ್ರೋನ್ ಕಳಿಸಿದರೆ, ಅದು ಎಲ್ಲ ಮಾಹಿತಿಗಳನ್ನ ಹೊತ್ತು ತರುತ್ತದೆ ಹಾಗೂ ಅವರಿಗೆ ನಾನು ಸ್ಥಳ ಪರಿಶೀಲನೆ ನಡೆಸಿರುವ ಸಂಗತಿಯೂ ತಿಳಿಯುವುದಿಲ್ಲ” ಎಂದು ಹೇಳುವುದೂ ಕಂಡು ಬರುತ್ತದೆ.
ಇದಕ್ಕೂ ಮುನ್ನ ಕೇಂದ್ರ ಸರಕಾರವನ್ನು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಸಂಸದ ಮಾನಿಕಮ್ ಠಾಗೋರ್, “ಹೊರಗಡೆ ಪ್ರಶ್ನೆ ಪತ್ರಿಕೆ ಸೋರಿಕೆ; ಒಳಗಡೆ ನೀರು ಸೋರಿಕೆ. ನಿರ್ಮಾಣಗೊಂಡು ಒಂದು ವರ್ಷದೊಳಗೆ ಅಧ್ಯಕ್ಷರು ಬಳಸುವ ಸಂಸತ್ತಿನ ಆವರಣದಲ್ಲಿ ನೀರು ಸೋರಿಕೆಯಾಗುತ್ತಿರುವುದು ಈ ನೂತನ ಕಟ್ಟಡದಲ್ಲಿ ಹವಾಮಾನ ತಾಳಿಕೆಯ ಸಮಸ್ಯೆ ಇರುವುದನ್ನು ಎತ್ತಿ ತೋರಿಸುತ್ತಿದೆ” ಎಂದು ಹೇಳಿದ್ದರು.