ವಯನಾಡಿಗೆ ನೆರವು ವಿಳಂಬ | ಕೇಂದ್ರದ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ
PC : PTI
ತಿರುವನಂತಪುರ : ಕೇರಳ ವಿಧಾನಸಭೆಯು ಭೂಕುಸಿತ ಪೀಡಿತ ವಯನಾಡಿಗೆ ನೆರವು ನೀಡಲು ವಿಳಂಬಿಸುತ್ತಿರುವ ಕೇಂದ್ರದ ವಿರುದ್ಧ ಸೋಮವಾರ ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿದೆ.
ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ ಅವರು ಸದನದಲ್ಲಿ ಮಂಡಿಸಿದ ನಿರ್ಣಯದಲ್ಲಿ, ಜು.30ರಂದು ವಯನಾಡಿನ ಮೆಪ್ಪಾಡಿ ಪಂಚಾಯತ್ನ ಚೂರಲ್ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಪ್ರದೇಶಗಳಲ್ಲಿ ಸಂಭವಿಸಿದ್ದ ಭೂಕುಸಿತಗಳಿಂದ ಉಂಟಾಗಿರುವ ವಿನಾಶಗಳನ್ನು ವಿವರಿಸುವ ಜ್ಞಾಪಕ ಪತ್ರವನ್ನು ಈಗಾಗಲೇ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ಇದುವರೆಗೂ ಯಾವುದೇ ತಕ್ಷಣದ ನೆರವು ದೊರಕಿಲ್ಲ ಮತ್ತು ಕೇಂದ್ರದಿಂದ ನೆರವು ಪಡೆಯುವಲ್ಲಿ ವಿಳಂಬವು ಭೂಕುಸಿತಗಳಲ್ಲಿ ಬದುಕುಳಿದವರ ಪುನರ್ವಸತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗಿದೆ.
ತಕ್ಷಣವೇ ಹಣಕಾಸು ನೆರವನ್ನು ಒದಗಿಸಲು ಮತ್ತು ಭೂಕುಸಿತ ಸಂತ್ರಸ್ತರ ಬ್ಯಾಂಕ್ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ಣಯವು ಆಗ್ರಹಿಸಿದೆ.
ಸದನವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಸ್ಪೀಕರ್ ಬಳಿಕ ಪ್ರಕಟಿಸಿದರು.