ಸತ್ಯಕ್ಕಾಗಿನ ರಾಹುಲ್ ಗಾಂಧಿ ಹೋರಾಟವನ್ನು ವಯನಾಡ್ ಅರ್ಥ ಮಾಡಿಕೊಂಡಿದೆ : ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ | PC : PTI
ವಯನಾಡ್ : ರಾಯ್ ಬರೇಲಿ ಸಂಸದ ರಾಹುಲ್ ಗಾಂಧಿ ಸತ್ಯಕ್ಕಾಗಿ ಹೋರಾಟ ಮಾಡುತ್ತಿರುವುದನ್ನು ವಯನಾಡ್ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ರವಿವಾರ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ವಯನಾಡ್ ನ ಮಂತವಾಡಿಯಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, “ನನ್ನ ಸಹೋದರನ ವಿರುದ್ಧ ಪ್ರಮುಖ ಅಪಪ್ರಚಾರವನ್ನು ಕೈಗೊಂಡಾಗ, ಆತ ಸತ್ಯದ ಪರ ಹೋರಾಡುತ್ತಿದ್ದಾನೆ ಎಂದು ಅರ್ಥ ಮಾಡಿಕೊಂಡಿದ್ದು ನೀವು” ಎಂದು ವಯನಾಡ್ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ವಯನಾಡ್ ಲೋಕಸಭಾ ಉಪ ಚುನಾವಣೆಯ ಪ್ರಚಾರದಲ್ಲಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾರೊಂದಿಗೆ ರಾಹುಲ್ ಗಾಂಧಿ ಕೂಡಾ ಪಾಲ್ಗೊಂಡಿದ್ದರು.
ವಯನಾಡ್ ವೈದ್ಯಕೀಯ ಕಾಲೇಜಿನಲ್ಲಿನ ಸೌಲಭ್ಯಗಳನ್ನು ಸುಧಾರಿಸಲು ರಾಹುಲ್ ಗಾಂಧಿ ತೀವ್ರ ಹೋರಾಟ ನಡೆಸಿದರು. ಹೀಗಿದ್ದೂ, ಅಲ್ಲಿನ ಸೌಲಭ್ಯಗಳು ಇನ್ನಷ್ಟು ಉತ್ತಮಗೊಳ್ಳಬೇಕಿದೆ. ಈ ಪ್ರಾಂತ್ಯದಲ್ಲಿನ ಉದ್ಯೋಗ ಕೊರತೆ ಸಮಸ್ಯೆಯ ಬಗ್ಗೆ ನಾನು ಗಮನ ಹರಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.
“ರಾಹುಲ್ ಗಾಂಧಿ ದಾರಿಯೊಂದನ್ನು ತೋರಿದ್ದಾರೆ. ಅವರು ನಿಮ್ಮ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರು. ಆದರೆ, ಸರಕಾರಗಳು ಜನರಿಗಾಗಿನ ಸರಕಾರಗಳಾಗಿ ಕೆಲಸ ನಿರ್ವಹಿಸುತ್ತಿಲ್ಲ” ಎಂದು ಅವರು ಆರೋಪಿಸಿದರು.
“ಪ್ರಧಾನಿ ಮೋದಿಯ ಸರಕಾರವು ಕೇವಲ ಅತ್ಯಂತ ಶ್ರೀಮಂತರಿಗಾಗಿ ಕೆಲಸ ಮಾಡುತ್ತದೆ. ಅವರ ಉದ್ದೇಶ ಉತ್ತಮ ಆರೋಗ್ಯ ಸೇವೆ, ಉತ್ತಮ ಜೀವನ ಮಟ್ಟ ಅಥವಾ ಉತ್ತಮ ಉದ್ಯೋಗಾವಕಾಶ ಒದಗಿಸುವುದಿಲ್ಲ. ಬದಲಿಗೆ ಅಧಿಕಾರದಲ್ಲಿ ಮುಂದುವರಿಯುವುದು. ಅದಕ್ಕಾಗಿನ ಸಾಧನಗಳೇನು? ಅವೆಂದರೆ, ನಿಮ್ಮನ್ನು ವಿಭಜಿಸುವುದು, ಆಕ್ರೋಶವನ್ನು ಹರಡುವುದು ಹಾಗೂ ನಿಮ್ಮ ನಡುವೆ ದ್ವೇಷವನ್ನು ಹರಡುವುದು” ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ತೆರವುಗೊಳಿಸಿರುವ ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಎಲ್ಡಿಎಫ್ ಅಭ್ಯರ್ಥಿಯಾಗಿ ಸತ್ಯನ್ ಮೊಕೇರಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ನವ್ಯಾ ಹರಿದಾಸ್ ಕಣಕ್ಕಿಳಿದಿದ್ದಾರೆ.
ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.