ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರಿಗೆ ಕೇಂದ್ರಿದಿಂದ ಇನ್ನೂ ಪರಿಹಾರ ಬಂದಿಲ್ಲ: ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್ | PC : PTI
ತಿರುವನಂತಪುರಂ: ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರ ಪುನವರ್ವಸತಿಗಾಗಿ ಕೇಂದ್ರ ಸರಕಾರದಿಂದ ಇದುವರೆಗೆ ಯಾವುದೇ ನೆರವು ಬಿಡುಗಡೆಯಾಗಿಲ್ಲ. ಆದರೆ, ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಬಂದಿರುವ 712.98 ಕೋಟಿ ರೂ. ಅನ್ನು ಪರಿಹಾರ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಭೂಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ರಾಜ್ಯ ಸರಕಾರವು ಮೊದಲಿಗೆ 2,271 ಕೋಟಿ ರೂ. ಮೊತ್ತ ಪರಿಹಾರ ಕೋರಿತ್ತು. ಆದರೆ, ವಿಪತ್ತಿನ ನಂತರದ ಅಗತ್ಯಗಳ ಮೌಲ್ಯಮಾಪನ (ಪಿಡಿಎನ್ಎ) ವರದಿಯ ಪ್ರಕಾರ, ಇನ್ನೂ ಹೆಚ್ಚಿನ ಪರಿಹಾರ ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರವು ವಯನಾಡ್ ಭೂಕುಸಿತವನ್ನು ‘ತೀವ್ರ ಪ್ರಕೃತಿಯ ವಿಪತ್ತು’ ಎಂದು ಘೋಷಿಸಿದೆ. ಹೀಗಾಗಿ, ಸಂಸದರು ಒಂದು ಕೋಟಿ ರೂ. ದೇಣಿಗೆ ನೀಡಬಹುದಾಗಿದೆ. ನಾನು ಈಗಾಗಲೇ ದೇಶದ ಎಲ್ಲ ಸಂಸದರಿಗೂ ನೆರವು ಕೋರಿ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಕುರುಕ್ಕೋಳಿ ಮೊಯ್ದೀನ್ ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲಿನಂತೆ ಉತ್ತರಿಸಿದ್ದಾರೆ.
ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಬಂದಿರುವ ಹಣವನ್ನು ಸಂತ್ರಸ್ತರ ಅನುಕೂಲಕ್ಕಾಗಿ ಬಳಸಲಾಗುವುದು ಹಾಗೂ ಪುನರ್ವಸತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೆ, ಉದ್ದೇಶಿತ ಟೌನ್ ಶಿಪ್ ಗಳಿಂದ ಹೊರಗುಳಿಯಲು ಬಯಸುವವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಜುಲೈ 30, 2024ರಂದು ನಡೆದಿದ್ದ ಈ ದುರಂತದಲ್ಲಿ ಪುಂಜಿರಿಮಟ್ಟಂ, ಚೂರಲ್ಮಲ ಹಾಗೂ ಮುಂಡಕ್ಕೈ ಎನ್ನುವ ಗ್ರಾಮಗಳು ನಾಮಾವಶೇಷವಾಗಿದ್ದವು. ಈ ಭೀಕರ ದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.