ಹವಾಮಾನ ಬದಲಾವಣೆಯಿಂದ ಶೇ. 10ರಷ್ಟು ಹೆಚ್ಚು ಮಳೆಯಾಗಿರುವುದು ವಯನಾಡ್ ಭೂಕುಸಿತಕ್ಕೆ ಕಾರಣ : ಅಧ್ಯಯನ ವರದಿ
ಹೊಸದಿಲ್ಲಿ : ವಿಜ್ಞಾನಿಗಳ ಜಾಗತಿಕ ತಂಡವು ನಡೆಸಿರುವ ತ್ವರಿತ ಕಾರಣ ಪತ್ತೆ ಅಧ್ಯಯನದಲ್ಲಿ, ಹವಾಮಾನ ಬದಲಾವಣೆಯಿಂದ ಶೇ. 10ರಷ್ಟು ಹೆಚ್ಚು ಮಳೆಯಾಗಿರುವುದರಿಂದ ವಯನಾಡ್ ನಲ್ಲಿ ಭೂಕುಸಿತವುಂಟಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ತಾಪಮಾನವು ಬಿಸಿಯಾಗುತ್ತಲೇ ಮುಂದುವರಿದಿರುವುದರಿಂದ, ಇಂತಹ ಘಟನೆಗಳು ಭವಿಷ್ಯದಲ್ಲಿ ಸಾಮಾನ್ಯವಾಗಲಿದೆ ಎಂದು ಭಾರತ, ಸ್ವೀಡನ್, ಅಮೆರಿಕ ಹಾಗೂ ಬ್ರಿಟನ್ ನ ಸಂಶೋಧಕರನ್ನೊಳಗೊಂಡಿದ್ದ ತಂಡವು ಎಚ್ಚರಿಕೆ ನೀಡಿದೆ.
ಮನುಷ್ಯನಿಂದಾಗಿರುವ ಹವಾಮಾನ ಬದಲಾವಣೆ ಮೇಲಿನ ಪರಿಣಾಮಗಳನ್ನು ಅಳೆಯಲು ಭಾಗಶಃ ಸಣ್ಣ ಅಧ್ಯಯನ ಪ್ರದೇಶದಲ್ಲಿನ ಮಳೆ ಪ್ರಮಾಣದ ನಿಖರ ಪ್ರತಿಫಲನಕ್ಕಾಗಿ ವರ್ಲ್ಡ್ ವೆದರ್ ಅಟ್ರಿಬ್ಯೂಷನ್ ತಂಡವು ಸಾಕಷ್ಟು ಆಳವಾಗಿ ಹವಾಮಾನ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಿದೆ.
ಈ ಮಾದರಿಗಳು ಹವಾಮಾನ ಬದಲಾವಣೆಯಿಂದ ಶೇ. 10ರಷ್ಟು ಮಳೆ ಪ್ರಮಾಣ ಏರಿಕೆಯಾಗಿದೆ ಎಂಬುದನ್ನು ಸೂಚಿಸಿವೆ ಎಂದು ಅಧ್ಯಯನ ತಂಡದ ಸಂಶೋಧಕರು ಹೇಳಿದ್ದಾರೆ.
1850-1900ರ ನಡುವಿನ ಸರಾಸರಿಗೆ ಹೋಲಿಸಿದರೆ, ಜಾಗತಿಕ ಸರಾಸರಿ ತಾಪಮಾನವೇನಾದರೂ ಮತ್ತೆ ಶೇ. 2ರಷ್ಟು ಹೆಚ್ಚಳಗೊಂಡರೆ, ಮಳೆಯ ತೀವ್ರತೆಯ ಪ್ರಮಾಣವು ಮತ್ತೆ ಶೇ. 4ರಷ್ಟು ಹೆಚ್ಚಳವಾಗಲಿದೆ ಎಂದು ಹವಾಮಾನ ಮಾದರಿಗಳು ಸೂಚಿಸಿವೆ.
ಹೀಗಿದ್ದೂ, ಅಧ್ಯಯನ ಪ್ರದೇಶವು ಕಿರಿದಾಗಿದ್ದು, ಸಂಕೀರ್ಣ ಮಳೆ ಪ್ರಮಾಣ-ಹವಾಮಾನ ತೀವ್ರತೆಯನ್ನು ಹೊಂದಿರುವ ಗುಡ್ಡುಗಾಡು ಪ್ರದೇಶಗಳಿರುವುದರಿಂದ ಈ ಮಾದರಿ ಫಲಿತಾಂಶದ ಬಗ್ಗೆ ತೀವ್ರ ಸ್ವರೂಪದ ಅನಿಶ್ಚಿತತೆಯೂ ಇದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಭಾರತವೂ ಸೇರಿದಂತೆ ಬಿಸಿಯೇರುತ್ತಿರುವ ಜಗತ್ತಿನಲ್ಲಿ ವಾತಾವರಣವು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ ಭಾರಿ ಪ್ರಮಾಣದ ಮಳೆಗೂ ಕಾರಣವಾಗುತ್ತಿರುವುದಕ್ಕೆ ಒಂದೇ ದಿನದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ವೈಜ್ಞಾನಿಕ ಪುರಾವೆ ಒದಗಿಸುತ್ತಿದೆ ಎಂದೂ ಹೇಳಲಾಗಿದೆ.
ವಿಜ್ಞಾನಿಗಳ ಪ್ರಕಾರ, ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುವ ಪ್ರತಿ ಒಂದು ಡಿಗ್ರಿ ಸೆಲ್ಷಿಯಸ್ ತಾಪಮಾನಕ್ಕೆ ಪ್ರತಿಯಾಗಿ ವಾತಾವರಣವು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ಶೇ. 7ರಷ್ಟು ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.