ವಯನಾಡ್ ಭೂ ಕುಸಿತ | ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರಕಾರ ಬದ್ಧ: ಕೇಂದ್ರ ಸಚಿವ ಸುರೇಶ್ ಗೋಪಿ
Photo: PTI
ತಿರುವನಂತಪುರಂ: ಕೇಂದ್ರ ಸರಕಾರವು ಸಾಧ್ಯವಿರುವ ಎಲ್ಲ ಬಗೆಯ ನಿಧಿ ಒದಗಿಸುವ ಮೂಲಕ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವ ಮೂಲಕ ಕೇರಳ ಸರಕಾರಕ್ಕೆ ನೆರವು ಹಾಗೂ ಸಹಾಯ ಒದಗಿಸಲಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುರೇಶ್ ಗೋಪಿ, “ನಾನು ಇಂದು ಬೆಳಗ್ಗೆ ಪ್ರಧಾನಿಯನ್ನು ಸಂಪರ್ಕಿಸಿದ್ದು, ರಕ್ಷಣಾ ಕಾರ್ಯಾಚರಣೆ ಸುಗಮವಾಗಿ ನಡೆಯುವುದನ್ನು ಖಾತರಿ ಪಡಿಸಲು ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿಯವರು ಕೇರಳ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದು, ಕೇಂದ್ರ ಸರಕಾರವು ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಮನ್ವಯತೆ ಸಾಧಿಸಲು ಜಿಲ್ಲಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ನಿರಂತರವಾಗಿ ಮುಖ್ಯಮಂತ್ರಿ ಹಾಗೂ ನನ್ನ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ವಿಪತ್ತು ನಿರ್ವಹಣಾ ಪಡೆಗಳತ್ತ ಧಾವಿಸಿ, ಅವರ ರಕ್ಷಣಾ ಪ್ರಯತ್ನಗಳಿಗೆ ನೆರವು ನೀಡಬೇಕು ಎಂದು ಬಿಜೆಪಿಯ ಎಲ್ಲ ಸ್ಥಳೀಯ ಕಾರ್ಯಕರ್ತರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಮಣ್ಣಿನೊಂದಿಗೆ ಬೃಹತ್ ಗಾತ್ರದ ಬಂಡೆಗಳೂ ಉರುಳಿ ಬಿದ್ದಿರುವುದರಿಂದ ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಗಾಯಗೊಂಡಿರುವ ವ್ಯಕ್ತಿಗಳು ಈಗಲೂ ಬಂಡೆಗಳ ನಡುವೆ ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.