ವಯನಾಡ್ ಭೂಕುಸಿತ: ಪರಿಹಾರ ಕಾರ್ಯದಲ್ಲಿ ಭಾಗಿಯಾಗಿರುವ ಘನಯಂತ್ರ ಚಾಲಕರಿಗೂ ಮಾನಸಿಕ ಆರೋಗ್ಯ ಕೌನ್ಸೆಲಿಂಗ್
ಅತ್ಯಂತ ಕರುಣಾಜನಕ ದೃಶ್ಯಗಳ ನಡುವೆಯೂ ಎದೆಗುಂದದೆ ನಿರ್ವಹಿಸಲು ಕ್ರಮ
ಸಾಂದರ್ಭಿಕ ಚಿತ್ರ | PC ; PTI
ತಿರುವನಂತಪುರಂ: ನೂರಾರು ಜನರನ್ನು ಬಲಿ ಪಡೆದ ವಯನಾಡಿನ ಭೀಕರ ಭೂಕುಸಿತದಲ್ಲಿ ಬದುಕುಳಿದವರಿಗೆ ಮಾತ್ರವಲ್ಲದೆ ಈ ಪರಿಹಾರ ಕಾರ್ಯಾಚರಣೆಯ ಭಾಗವಾಗಿರುವ ಘನ ಯಂತ್ರಗಳ ನಿರ್ವಾಹಕರಿಗೂ ಕೇರಳ ಸರ್ಕಾರ ಮಾನಸಿಕ ಆರೋಗ್ಯ ಕೌನ್ಸೆಲಿಂಗ್ ವ್ಯವಸ್ಥೆ ಮಾಡಿದೆ. ಕೇರಳ ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ಇಲಾಖೆ ಈ ಸೌಲಭ್ಯವನ್ನು ಒದಗಿಸುತ್ತಿದೆ.
ಈ ಮೂಲಕ ಘನ ಯಂತ್ರಗಳ ನಿರ್ವಾಹಕರು ತಮ್ಮ ಕಾರ್ಯವನ್ನು ಇನ್ನಷ್ಟು ಆತ್ಮವಿಶ್ವಾಸದಿಂದ ಹಾಗೂ ತಮ್ಮೆದುರು ಅನಾವರಣಗೊಳ್ಳುವ ಅತ್ಯಂತ ಕರುಣಾಜನಕ ದೃಶ್ಯಗಳ ನಡುವೆಯೂ ಎದೆಗುಂದದೆ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಇಲಾಖೆ ಹೇಳಿದೆ.
ಕೇರಳ ಹೊರತಾಗಿ ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಒಡಿಶಾ, ಕರ್ನಾಟಕ ಮತ್ತು ಜಾರ್ಖಂಡ್ ಮೂಲದ 300ಕ್ಕೂ ಅಧಿಕ ಘನ ಯಂತ್ರಗಳ ಚಾಲಕರು ಭೂಕುಸಿತ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಅವರಿಗೆ ಅವರ ರಾಜ್ಯ ಭಾಷೆಯಲ್ಲಿಯೇ ಕೌನ್ಸೆಲಿಂಗ್ ಒದಗಿಸಲು ಕ್ರಮಕೈಗೊಳ್ಳಲಾಗಿದೆ.
ಭೂಕುಸಿತದಿಂದ ಬಾಧಿತರಾದ ಎಲ್ಲರಿಗೂ ಮಾನಸಿಕ ಆರೋಗ್ಯ ಕುರಿತಂತೆ ಆರೈಕೆ ಮತ್ತು ಬೆಂಬಲ ಒದಗಿಸಲು ಒಂದು ಸಂಚಾರಿ ಮಾನಸಿಕ ಆರೋಗ್ಯ ಘಟಕವೂ ಕಾರ್ಯಾಚರಿಸುತ್ತಿದೆ. ಈ ಘಟಕದಲ್ಲಿ ವೈದ್ಯಕೀಯ ಕಾಲೇಜುಗಳ ವೈದ್ಯರು ಸಾಮೂಹಿಕ ಹಾಗೂ ವೈಯಕ್ತಿಕ ಕೌನ್ಸೆಲಿಂಗ್ ಸೇವೆ ಒದಗಿಸುತ್ತಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಪರಿಹಾರ ಶಿಬಿರಗಳಲ್ಲಿರುವ ಸಂತ್ರಸ್ತರು ಹಾಗೂ ಭೂಕುಸಿತ ಸ್ಥಳದ ಅಸುಪಾಸಿನ ನಿವಾಸಿಗಳಿಗೆ ಅಗತ್ಯ ಸೂಪರ್-ಸ್ಪೆಷಾಲಿಟಿ ಟೆಲಿಕನ್ಸಲ್ಟೇಶನ್ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.