ವಯನಾಡ್ ಭೂಕುಸಿತ | ತಮ್ಮ ಪ್ರೀತಿ ಪಾತ್ರರ ಮೃತದೇಹಗಳಿಗಾಗಿ ಕಾಯುತ್ತಿರುವ ಕರ್ನಾಟಕದ ಸಂತ್ರಸ್ತರ ಕುಟುಂಬಗಳು
PC : PTI
ವಯನಾಡ್ : ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಸುಮಾರು ಮೂರು ದಿನಗಳ ಬಳಿಕ ದುರಂತದ ಕೇಂದ್ರ ಪ್ರದೇಶದಿಂದ ಹೃದಯ ವಿದ್ರಾವಕ ಕಥೆಗಳು ಮುನ್ನೆಲೆಗೆ ಬರುತ್ತಿವೆ. ಹವಾಮಾನ ವೈಪರಿತ್ಯದ ನಡುವೆಯೂ ರಕ್ಷಣಾ ಕಾರ್ಯಕರ್ತರು ಮುಂಡಕ್ಕೈ ಹಾಗೂ ಚೂರಲ್ಮಲದಲ್ಲಿ ಕೆಸರಿನಿಂದ ವಿರೂಪಗೊಂಡ ಮೃತದೇಹಗಳು ಹಾಗೂ ದೇಹದ ಅಂಗಗಳನ್ನು ಹೊರ ತೆಗೆಯುತ್ತಿದ್ದಾರೆ. ಇದರಿಂದ ಕರ್ನಾಟಕದ ಸಂತ್ರಸ್ತರ ಕುಟುಂಬಗಳಿಗೆ ತಮ್ಮ ಪ್ರೀತಿ ಪಾತ್ರರನ್ನು ಗುರುತಿಸುವುದು ಸವಾಲಾಗುತ್ತಿದೆ.
ಮೇಪ್ಪಾಡಿಯಲ್ಲಿರುವ ಪರಿಹಾರ ಕೇಂದ್ರಗಳಲ್ಲಿ ತಂಗಿರುವ ಕರ್ನಾಟಕದ ಸುಮಾರು 40 ಜನರು ತಮ್ಮ ಪ್ರೀತ ಪಾತ್ರರ ಮೃತದೇಹಗಳನ್ನ್ನು ಪಡೆಯಲು ಇನ್ನೂ ಕಾಯುತ್ತಿದ್ದಾರೆ. ವಯನಾಡ್ ಭೂಕುಸಿತದಲ್ಲಿ ಕರ್ನಾಟಕದ 18 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 7 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ ಹಾಗೂ ದಫನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಗುರುವಾರ ಮತ್ತೆ ಕರ್ನಾಟಕದ ಐವರ ಮೃತದೇಹಗಳು ಪತ್ತೆಯಾಗಿವೆ. ಅವರೆಂದರೆ ಕೊಡಗು ಜಿಲ್ಲೆಯ ಸಿದ್ಧಾಪುರದ ದೊರೆಸ್ವಾಮಿ (48), ಅವರ ಪುತ್ರಿ ದರ್ಶಿನಿ (19) ಅವರ ಸೋದರ ಸಂಬಂಧಿ ರೋಹಿತ್(18) ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಲೀಲಾವತಿ (50) ಹಾಗೂ ನೇಹಲ್ (7). ಇವರ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಚಾಮರಾಜನಗರದ ವೆಂಕಟಯ್ಯ ಛತ್ರ ಸಮೀಪದ ರಾಜೇಂದ್ರ (ರಾಜನ್) ಅವರ ಮೃತದೇಹವನ್ನು ಕರ್ನಾಟಕ ಕಂದಾಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಮುಖ ವಿರೂಪಗೊಂಡಿದ್ದರೂ ಮೃತದೇಹವನ್ನು ಅವರ ನೆರೆಯವರು ಗುರುತು ಹಿಡಿದಿದ್ದಾರೆ. ಆದರೂ ಅವರ ಸಹೋದರಿ ಇದನ್ನು ನಿರಾಕರಿಸಿದ್ದಾರೆ. ಇದರಿಂದ ಮೃತದೇಹಗಳನ್ನು ಗುರುತು ಹಿಡಿಯುವುದು ಅಧಿಕಾರಿಗಳಿಗೆ ಸವಾಲಾಗುತ್ತಿದೆ.
ಈ ನಡುವೆ ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಮಹಾದೇವಿ (75) ಅವರು ತಮ್ಮ ಪ್ರೀತಿಪಾತ್ರರಿಗಾಗಿ ಈಗಲೂ ಹುಡಕಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ ಮಹಾದೇವಿ ಅವರ ಸೊಸೆ ಸಾವಿತ್ರಿ (52), ಪುತ್ರ ಶಿವಣ್ಣ (50) ಹಾಗೂ ಮೊಮ್ಮಗಳು ಶ್ರೀಯಾ (19)ರ ಮೃತದೇಹಗಳನ್ನು ಗುರುತಿಸಲಾಗಿದೆ ಹಾಗೂ ಗುರುವಾರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಭೂಕುಸಿತ ಸಂಭವಿಸಿದ ಬಳಿಕ ಮಹಾದೇವಿ ಅವರ ಕುಟುಂಬದ 9 ಸದಸ್ಯರು ಕಾಣೆಯಾಗಿದ್ದಾರೆ. ವಯನಾಡ್ನ ಪರಿಹಾರ ಕೇಂದ್ರದಲ್ಲಿ ತಂಗಿರುವ ಮಹಾದೇವಿ ತನ್ನ ಕುಟುಂಬದ ಸದಸ್ಯರಿಗಾಗಿ ಶವಾಗಾರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಮೃತದೇಹಗಳು ಗುರುತು ಸಿಗಲಾರದಷ್ಟು ವಿರೂಪಗೊಂಡಿರುವುದರಿಂದ ಅವರಿಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ.
‘‘ನನಗೆ ಕಾಲು, ಅಂಗ, ತಲೆಯ ಭಾಗಗಳನ್ನು ನೋಡಿ ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ. 30ಕ್ಕೂ ಅಧಿಕ ಆ್ಯಂಬುಲೆನ್ಸ್ಗಳು ಆಸ್ಪತ್ರೆ ಹಾಗೂ ಶವಾಗಾರಕ್ಕೆ ತಲುಪಬೇಕಿದೆ. ಅವುಗಳ ಬಂದ ಬಳಿಕವೇ ನನಗೆ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯ’’ ಎಂದು ಮಹಾದೇವಿ ತಿಳಿಸಿದ್ದಾರೆ.
ಮೇಪ್ಪಾಡಿಯಲ್ಲಿ ನೆಲೆಸಿರುವ ಮಂಡ್ಯ ಮೂಲದ ಸುಪ್ರಿಯಾ, ಚೂರಲ್ಮಲದಲ್ಲಿ ವಾಸವಿದ್ದ ನನ್ನ ಸಹೋದರ ಹಾಗೂ ಅವರ ಪತ್ನಿ ಇದುವರೆಗೆ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಕೆಲವು ದೇಹ ಭಾಗಗಳು ಹಾಗೂ ವಿರೂಪಗೊಂಡ ಮೃತದೇಹಗಳನ್ನು ಗುರುತು ಹಿಡಿಯಲು ಕಷ್ಟವಾಗುತ್ತಿದೆ ಎಂದು ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.