ವಯನಾಡ್ ಪುನರ್ವಸತಿಗೆ 530 ಕೋಟಿ ರೂ. ಸಾಲ ಮಂಜೂರು ಮಾಡಿದ ಕೇಂದ್ರ ಸರಕಾರ: ಮಾರ್ಚ್ 31ರೊಳಗೆ ಬಳಕೆಯಾಗಬೇಕು ಎಂಬ ಶರತ್ತು

PC : PTI
ತಿರುವನಂತಪುರಂ: ಭೂಕುಸಿತ ಪೀಡಿತ ವಯನಾಡ್ ಜನತೆಯ ಪುನರ್ವಸತಿಗಾಗಿ ಕೇಂದ್ರ ಸರಕಾರವು 529.5 ಕೋಟಿ ರೂ. ಬಡ್ಡಿರಹಿತ ಬಂಡವಾಳ ಹೂಡಿಕೆ ಸಾಲವನ್ನು ಕೇರಳಕ್ಕೆ ಮಂಜೂರು ಮಾಡಿದೆ.
16 ಪುನರ್ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು 50 ವರ್ಷಗಳ ಮರುಪಾವತಿ ಅವಧಿಯೊಂದಿಗೆ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಒದಗಿಸುವ ವಿಶೇಷ ನೆರವಿನ ಯೋಜನೆಯಡಿ ಈ ಹಣಕಾಸು ನೆರವನ್ನು ಬಡ್ಡಿರಹಿತ ಬಂಡವಾಳ ಹೂಡಿಕೆ ಸಾಲವನ್ನಾಗಿ ಮಂಜೂರು ಮಾಡಲಾಗಿದೆ. ಈ ಅನುದಾನ ಬಳಕೆಯ ವರದಿಯನ್ನು ಮಾರ್ಚ್ 31ರೊಳಗೆ ಸಲ್ಲಿಸಬೇಕಾಗಿದೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್, ಮಾರ್ಚ್ 31ರೊಳಗೆ ಅನುದಾನವನ್ನು ಬಳಕೆ ಮಾಡಬೇಕು ಎಂಬುದು ತೀರಾ ಅಪ್ರಾಯೋಗಿಕವಾಗಿದೆ. ಈ ವಿಷಯದ ಕುರಿತು ಸರಕಾರ ಗಮನ ಹರಿಸುತ್ತದೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದರು. ಭೂಕುಸಿತವನ್ನು ಗಂಭೀರ ಪ್ರಾಕೃತಿಕ ವಿಕೋಪವನ್ನಾಗಿ ಪರಿಗಣಿಸಲು ಈಗಾಗಲೇ ಕೇಂದ್ರ ಸರಕಾರ ನಿರ್ಧರಿಸಿರುವುದರಿಂದ, ನಾವು ಅನುದಾನದ ರೂಪ್ದಲ್ಲಿ ಆರ್ಥಿಕ ನೆರವನ್ನು ನಿರೀಕ್ಷಿಸುತ್ತಿದ್ದೇವೆ ಎಂದೂ ಅವರು ಹೇಳಿದರು.
ಈ ನಡುವೆ, ಇದು ಕೇವಲ ಕೇಂದ್ರ ಸರಕಾರದ ಕಣ್ಣೊರೆಸುವ ತಂತ್ರ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.