ವಯನಾಡ್ | ಬೆಟ್ಟದ ತುದಿಯ ಗುಹೆಯಿಂದ 6 ಬುಡಕಟ್ಟು ಜನರ ರಕ್ಷಣೆ ; ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸಾಹಸಮಯ ಕಾರ್ಯಾಚರಣೆ
PC : indiatoday.in
ವಯನಾಡ್ : ದಿಟ್ಟ ರಕ್ಷಣಾ ಕಾರ್ಯಾಚರಣೆಯೊಂದರಲ್ಲಿ, ಕೇರಳ ಅರಣ್ಯ ಇಲಾಖೆಯ ಸಿಬ್ಬಂದಿ ವಯನಾಡ್ನ ಪರ್ವತವೊಂದರ ತುದಿಯಲ್ಲಿ ಗುಹೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಬುಡಕಟ್ಟು ಸಮುದಾಯದ ಆರು ಮಂದಿಯನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ನಾಲ್ವರು ಪುಟ್ಟ ಮಕ್ಕಳು ಮತ್ತು ಅವರ ಹೆತ್ತವರು ಸೇರಿದ್ದಾರೆ. ವಯನಾಡ್ನಲ್ಲಿ ಭೂಕುಸಿತ ಸಂಭವಿಸಿದ ಬಳಿಕ ಅವರು ಗುಹೆಯಲ್ಲಿ ಬಂಧಿಯಾಗಿದ್ದರು.
PC : X
ಕಲ್ಪೆಟ್ಟ ವಲಯ ಅರಣ್ಯ ಅಧಿಕಾರಿ ಕೆ. ಹಾಶಿಸ್ ನೇತೃತ್ವದ ನಾಲ್ವರು ಸದಸ್ಯರ ರಕ್ಷಣಾ ತಂಡವು ಒಂದರಿಂದ ನಾಲ್ಕು ವರ್ಷಗಳ ನಡುವಿನ ಮಕ್ಕಳನ್ನು ಒಳಗೊಂಡ ಬುಡಕಟ್ಟು ಕುಟುಂಬವನ್ನು ರಕ್ಷಿಸಿತು. ರಕ್ಷಣಾ ಕಾರ್ಯಾಚರಣೆಯು ಸುಮಾರು 8 ಗಂಟೆಗಳ ಕಾಲ ನಡೆಯಿತು.
‘‘ಈ ಕುಟುಂಬವು ವಯನಾಡ್ನ ಪನಿಯ ಸಮುದಾಯಕ್ಕೆ ಸೇರಿದೆ. ಅದು ಪರ್ವತವೊಂದರ ತುದಿಯಲ್ಲಿರುವ ಗುಹೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿತ್ತು’’ ಎಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಹಾಶಿಸ್ ಹೇಳಿದರು.
PC : indiatoday.in
ಗುಹೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತನ್ನ ಮೂವರು ಮಕ್ಕಳು ಮತ್ತು ಅವರ ತಂದೆಗಾಗಿ ಆಹಾರ ಅರಸಿಕೊಂಡು ಬಂದಿದ್ದ ಮಕ್ಕಳ ತಾಯಿ ಮತ್ತು ಅವರ ನಾಲ್ಕು ವರ್ಷ ಮಗುವನ್ನು ತಾವು ಪತ್ತೆಹಚ್ಚಿದೆವು ಎಂದು ಹಾಶಿಸ್ ತಿಳಿಸಿದರು.
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳ ಮೂಲಕ ನಡೆದುಕೊಂಡು ಹೋಗಿ ಎಂಟು ಗಂಟೆಗಳ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಯ ಸಾಹಸವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ಲಾಘಿಸಿದರು.
‘‘ಭೂಕುಸಿತ ಸಂಭವಿಸಿದ ವಯನಾಡ್ನಲ್ಲಿ ನಮ್ಮ ಸಾಹಸಿ ಅರಣ್ಯ ಅಧಿಕಾರಿಗಳು 8 ಗಂಟೆಗಳ ಕಾಲ ದಣಿವುರಹಿತ ಕಾರ್ಯಾಚರಣೆ ನಡೆಸಿ ದೂರದ ಬುಡಕಟ್ಟು ವಸತಿ ಪ್ರದೇಶದಿಂದ ಆರು ಅಮೂಲ್ಯ ಜೀವಗಳನ್ನು ರಕ್ಷಿಸಿದ್ದಾರೆ. ಅವರ ಸಾಹಸವು ಈ ಅತ್ಯಂತ ಕರಾಳ ಸಮಯದಲ್ಲೂ ಕೇರಳದ ಪುಟಿದೇಳುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಭರವಸೆಯು ನಮ್ಮನ್ನು ಒಗ್ಗೂಡಿಸಿದ್ದು, ನಾವು ಮರುನಿರ್ಮಾಣ ಮಾಡುತ್ತೇವೆ ಮತ್ತು ಬಲಿಷ್ಠವಾಗಿ ಹೊರಹೊಮ್ಮುತ್ತೇವೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪಿಣರಾಯಿ ವಿಜಯನ್ ಬರೆದಿದ್ದಾರೆ.
ಮಳೆ ಪ್ರಮಾಣ ಹೆಚ್ಚುತ್ತಿರುವಂತೆಯೇ, ವಯನಾಡ್ನಲ್ಲಿರುವ ಬುಡಕಟ್ಟು ಸಮುದಾಯಗಳ ಹೆಚ್ಚಿನ ಸದಸ್ಯರನ್ನು ಅರಣ್ಯ ಇಲಾಖೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
PC : indiatoday.in
ಬುಡಕಟ್ಟು ಸಮುದಾಯವು ಅರಣ್ಯ ಉತ್ಪನ್ನಗಳನ್ನು ತಿಂದು ಬದುಕುತ್ತಿದೆ ಹಾಗೂ ಅವರು ಸಾಮಾನ್ಯವಾಗಿ ಇತರರೊಡನೆ ಸಂಪರ್ಕ ಇಟ್ಟುಕೊಳ್ಳುವುದಿಲ್ಲ ಎಂದು ಹಾಶಿಸ್ ಹೇಳಿದರು. ‘‘ಆದರೆ, ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ಆಹಾರ ಸಂಗ್ರಹಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಕಾಣುತ್ತದೆ’’ ಎಂದು ಅವರು ಹೇಳಿದರು.
ಅರಣ್ಯ ಇಲಾಖೆ ಸಿಬ್ಬಂದಿಯು ಭಾರೀ ಮಳೆಯ ನಡುವೆ ಕಡಿದಾದ ಬೆಟ್ಟವನ್ನು ಹಗ್ಗಗಳ ಸಹಾಯದಿಂದ ಹತ್ತಿದೆ.
‘‘ಮಕ್ಕಳು ದಣಿದಿದ್ದರು. ನಾವು ಅಲ್ಲಿಗೆ ಏನನ್ನು ತೆಗೆದುಕೊಂಡು ಹೋಗಿದ್ದೇವೆಯೋ ಅದನ್ನು ಮಕ್ಕಳಿಗೆ ತಿನಿಸಿದೆವು. ತುಂಬಾ ಮನವೊಲಿಕೆಯ ಬಳಿಕ, ನಮ್ಮೊಂದಿಗೆ ಬರಲು ಅವರ ತಂದೆ ಒಪ್ಪಿದರು. ನಾವು ಮಕ್ಕಳನ್ನು ನಮ್ಮ ಬೆನ್ನಿಗೆ ಕಟ್ಟಿಕೊಂಡು ಹಿಮ್ಮುಕ ಪ್ರಯಾಣವನ್ನು ಆರಂಭಿಸಿದೆವು’’ ಎಂದರು.
ವಯನಾಡ್ನಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 350 ದಾಟಿದೆ. ರಸ್ತೆಗಳು, ಸೇತುವೆಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯಗಳು ಸಂಪೂರ್ಣ ನಾಶವಾಗಿವೆ.