ವಯನಾಡು : ನರಭಕ್ಷಕ ಹುಲಿಯ ಹೊಟ್ಟೆಯೊಳಗೆ ಮಹಿಳೆಯ ಕೂದಲು, ಕಿವಿಯೋಲೆಗಳು ಪತ್ತೆ!

Photo | PTI
ವಯನಾಡು : ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದ ನರಭಕ್ಷಕ ಹುಲಿಯ ಕಳೇಬರ ಸೋಮವಾರ ಕೇರಳದ ವಯನಾಡಿನಲ್ಲಿ ಪತ್ತೆಯಾಗಿದೆ. ಹುಲಿಯ ಶವಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯೊಳಗೆ ಮಹಿಳೆಯ ಕೂದಲು, ಬಟ್ಟೆ ಮತ್ತು ಕಿವಿಯೋಲೆಗಳು ಇರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 24ರಂದು ಮಾನಂತವಾಡಿ ಗ್ರಾಮದ ಪ್ರಿಯದರ್ಶಿನಿ ಎಸ್ಟೇಟ್ ನ ಅರಣ್ಯದ ಅಂಚಿನಲ್ಲಿರುವ ಎಸ್ಟೇಟ್ ನಲ್ಲಿ ಕಾಫಿ ಬೀಜಗಳನ್ನು ಸಂಗ್ರಹಿಸಲು ಹೋಗಿದ್ದ ಮಹಿಳೆಯ ಮೇಲೆ ಹುಲಿ ದಾಳಿ ಮಾಡಿ ತಿಂದು ಹಾಕಿತ್ತು. ನಾಲ್ಕರಿಂದ ಐದು ವರ್ಷ ವಯಸ್ಸಿನ ನರ ಭಕ್ಷಕ ಹೆಣ್ಣು ಹುಲಿಯನ್ನು ಸೋಮವಾರ ಮುಂಜಾನೆ ವನ್ಯಜೀವಿ ಸಿಬ್ಬಂದಿಯ ತಂಡ ಪತ್ತೆ ಹಚ್ಚಿದೆ. ಆದರೆ ಆ ಬಳಿಕ ಅದೇ ಹುಲಿ ಪಿಲಕಾವುವಿನ ಜನವಸತಿ ಪ್ರದೇಶದ ಮನೆಯ ಹಿಂದೆ ಮೃತಪಟ್ಟು ಬಿದ್ದಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹುಲಿಯ ಕುತ್ತಿಗೆಯಲ್ಲಿ ಆಳವಾದ ಗಾಯಗಳು ಈ ವೇಳೆ ಪತ್ತೆಯಾಗಿದ್ದು, ಹುಲಿಯ ಸಾವಿಗೆ ಈ ಗಾಯವೇ ಕಾರಣ ಎಂದು ಹೇಳಲಾಗಿದೆ. ಆಳವಾದ ಕಾಡಿನಲ್ಲಿ ಮತ್ತೊಂದು ಹುಲಿ ಆಕ್ರಮಣ ನಡೆಸಿದ್ದರಿಂದ ಈ ಗಾಯಗಳಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.
ಮಾನಂತವಾಡಿ ಗ್ರಾಮದ ಪ್ರಿಯದರ್ಶಿನಿ ಎಸ್ಟೇಟ್ ನ ಅರಣ್ಯದ ಅಂಚಿನಲ್ಲಿ ಕಾಫಿ ಕೊಯ್ಯಲು ಹೊರಟಿದ್ದ ರಾಧಾ ಅವರ ಮೇಲೆ ಹುಲಿ ದಾಳಿ ಮಾಡಿರುವ ವಿಚಾರ ತಿಳಿದು ಆ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಇದರಿಂದಾಗಿ ರಾಜ್ಯ ಸರ್ಕಾರವು ರವಿವಾರ ಹುಲಿಯನ್ನು 'ನರಭಕ್ಷಕ' ಎಂದು ಘೋಷಿಸಿ ಅದನ್ನು ಕೊಲ್ಲುವುದಾಗಿ ಘೋಷಿಸಿತ್ತು. ಆದರೆ ಅದೇ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.