“ನಮ್ಮನ್ನು ಹಿಂದಿಯ ಗುಲಾಮರಾಗಿಸಲು ಸಾಧ್ಯವಿಲ್ಲ”: ಅಮಿತ್ ಶಾ ಅವರ ಹಿಂದಿ ಪರ ಹೇಳಿಕೆಗೆ ಸ್ಟಾಲಿನ್ ಖಂಡನೆ
ಅಮಿತ್ ಶಾ, ಸ್ಟಾಲಿನ್ | Photo: PTI
ಚೆನ್ನೈ: ಅಧಿಕೃತ ಭಾಷೆ ಕುರಿತು ಸಂಸದೀಯ ಸಮಿತಿಯ 38ನೇ ಸಭೆಯಲ್ಲಿ, ‘ಹಿಂದಿಯನ್ನು ಸ್ವೀಕರಿಸುವುದು ನಿಧಾನವಾದರೂ ಅಂತಿಮವಾಗಿ ನಾವು ಅದನ್ನು ಯಾವುದೇ ವಿರೋಧವಿಲ್ಲದೆ ಸ್ವೀಕರಿಸಲೇಬೇಕು’ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಲವಾಗಿ ಖಂಡಿಸಿದ್ದಾರೆ.
ಟ್ವೀಟ್ ನಲ್ಲಿ ಶಾ ಅವರ ಅಭಿಪ್ರಾಯವನ್ನು ಆಕ್ಷೇಪಿಸಿರುವ ಸ್ಟಾಲಿನ್ ಹಿಂದಿ ಸ್ವೀಕಾರಕ್ಕೆ ಅವರ ಒತ್ತನ್ನು ಟೀಕಿಸಿದ್ದಾರೆ. ‘ಇದು ಹಿಂದಿ ಮಾತನಾಡದವರನ್ನು ದಮನಿಸುವ ರಾಜಾರೋಷ ಪ್ರಯತ್ನವಾಗಿದೆ. ತಮಿಳುನಾಡು ಯಾವುದೇ ರೂಪದಲ್ಲಿ ಹಿಂದಿಯ ಪ್ರಾಬಲ್ಯ ಮತ್ತು ಹೇರಿಕೆಯನ್ನು ವಿರೋಧಿಸುತ್ತದೆ, ಏಕೆಂದರೆ ಅದು ಇಂತಹ ಕ್ರಮವನ್ನು ಅನುಮೋದಿಸುವ ರಾಜ್ಯವಲ್ಲ. ನಮ್ಮ ಭಾಷೆ ಮತ್ತು ಪರಂಪರೆ ನಮ್ಮನ್ನು ವ್ಯಾಖ್ಯಾನಿಸುತ್ತವೆ. ನಮ್ಮನ್ನು ಹಿಂದಿಯ ಗುಲಾಮರಾಗಿಸಲು ಸಾಧ್ಯವಿಲ್ಲ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಂತೆ ಹಲವಾರು ರಾಜ್ಯಗಳೂ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಹಿಂದಿ ಹೇರಿಕೆಗೆ ಹೆಚ್ಚುತ್ತಿರುವ ಪ್ರತಿರೋಧವನ್ನು ಗಮನಕ್ಕೆ ತೆಗೆದುಕೊಳ್ಳಿ ’ ಎಂದು ಅವರು ಹೇಳಿದ್ದಾರೆ.
1965ರ ಹಿಂದಿ ಹೇರಿಕೆ ವಿರುದ್ಧ ಆಂದೋಲನದ ಬೆಂಕಿಯನ್ನು ಮತ್ತೆ ಹೊತ್ತಿಸುವುದು ಅವಿವೇಕದ ನಡೆಯಾಗುತ್ತದೆ ಎಂದೂ ಎಚ್ಚರಿಕೆ ನೀಡಿರುವ ಸ್ಟಾಲಿನ್, ಬಿಜೆಪಿ ನಾಯಕರು ಅನುಸರಿಸುತ್ತಿರುವ ಸೋಗಿನ ರಾಜಕೀಯದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ತಮಿಳುನಾಡಿನಲ್ಲಿ ತಮಿಳನ್ನು ಪ್ರಾಚೀನ ಭಾಷೆ ಎಂದು ಪ್ರಶಂಸಿಸುವ ಅವರು ದಿಲ್ಲಿಯನ್ನು ತಲುಪಿದಾಗ ವಿಷವನ್ನು ಕಾರುತ್ತಾರೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಈ ನಡುವೆ ಪಿಎಂಕೆ ಸ್ಥಾಪಕ ಎಸ್.ರಾಮದಾಸ್ ಅವರೂ ಶಾ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ಶಾ ಹೇಳಿಕೆಯು ಹಿಂದಿ ಭಾಷೆಯಲ್ಲಿ ಅವರ ವಿಶ್ವಾಸವನ್ನು ತೋರಿಸುವುದಿಲ್ಲ, ಬದಲಿಗೆ ಹಿಂದಿ ಹೇರುವ ಅವರ ಆಶಯವನ್ನು ಬಹಿರಂಗಗೊಳಿಸಿದೆ. ಹಿಂದಿಯನ್ನು ಹೇರುವ ಪ್ರಯತ್ನಗಳು ಭೂತಕಾಲದಂತೆ ಭವಿಷ್ಯದಲ್ಲಿಯೂ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.