‘ನಮ್ಮ ಗ್ರಾಮದಲ್ಲಿ ಮುಸ್ಲಿಮರು ಬೇಕಿಲ್ಲ’: ಧರ್ಮದ ಕಾರಣದಿಂದ ನೂತನ ಮನೆಗೆ ನೋಂದಣಿ ನಿರಾಕರಣೆ; ವರದಿ
Photo: Twitter \ @newslaundry
ಪುಣೆ: ಪುಣೆ ಜಿಲ್ಲೆಯ ನಿರ್ಮಾಣ ಗುತ್ತಿಗೆದಾರರೋರ್ವರು ತನ್ನ ನೂತನ ಮನೆಯ ನೋಂದಣಿ ಮಾಡಿಸಲು ಪರದಾಡುತ್ತಿದ್ದಾರೆ. ಮುಸ್ಲಿಮ್ ಎಂಬ ಏಕೈಕ ಕಾರಣದಿಂದಾಗಿ ಗ್ರಾಮ ಪಂಚಾಯತಿಯು ಅವರ ಕಟ್ಟಡಕ್ಕೆ ನೋಂದಣಿಯನ್ನು ನಿರಾಕರಿಸಿದೆ ಎಂದು newslaundry.com ವರದಿ ಮಾಡಿದೆ.
ಪುಣೆ ಜಿಲ್ಲೆಯ ಕಾತ್ರಜ್ ನ ಅಂಬೆಗಾಂವ್ ನಿವಾಸಿ ಕಾಸಿಮ್ ಮುಲ್ಲಾ (73) ಅವರು 10 ವರ್ಷಗಳ ಹಿಂದೆ 50 ಕಿ.ಮೀ.ದೂರದ ಮಾವಳ ತಾಲೂಕಿನ ಕಂಬ್ರೆ ನಾಮಾ ಗ್ರಾಮದಲ್ಲಿ 4,000 ಚದುರಡಿ ವಿಸ್ತೀರ್ಣದ ನಿವೇಶನವನ್ನು ಖರೀದಿಸಿದ್ದರು. ಎಪ್ರಿಲ್ನಲ್ಲಿ ಈ ನಿವೇಶನದಲ್ಲಿ 10 10 ಅಡಿ ವಿಸ್ತೀರ್ಣದ ಪುಟ್ಟ ಕಟ್ಟಡವನ್ನು ನಿರ್ಮಿಸಿದ್ದ ಅವರು ಜೂನ್ನಲ್ಲಿ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.
‘ನಾವು ಗ್ರಾಮಸೇವಕರಿಗೆ ದಾಖಲೆಗಳನ್ನು ಸಲ್ಲಿಸಿದ್ದೆವು. ಜೂ.30ರಂದು ಪಂಚಾಯತ್ ಸಭೆಯು ನಡೆಯಲಿದೆ ಮತ್ತು ನೋಂದಣಿಯನ್ನು ಮಾಡಲಾಗುವುದು ಎಂದು ಅವರು ನಮಗೆ ತಿಳಿಸಿದ್ದರು ’ಎಂದು ಮುಲ್ಲಾರ ಪುತ್ರ ಜಾವೇದ್ (31) ಹೇಳಿದರು.
ಆದರೆ ಪಂಚಾಯತ್ ಅವರ ಅರ್ಜಿಯನ್ನು ವಜಾಗೊಳಿಸಿದೆ. ತೆರಿಗೆ ಉದ್ದೇಶಗಳಿಗೆ ಮಾತ್ರವಲ್ಲ, ವಿದ್ಯುತ್, ನೀರು ಇತ್ಯಾದಿ ಮೂಲ ಸೌಲಭ್ಯಗಳನ್ನು ಪಡೆಯಲೂ ನೋಂದಣಿಯು ಅಗತ್ಯವಾಗಿದೆ.
‘ಸಂಬಂಧಿತ ವ್ಯಕ್ತಿಯು ಮುಸ್ಲಿಮ್ ಆಗಿರುವುದರಿಂದ ನೋಂದಣಿಯನ್ನು ಮಾಡಲು ಸಾಧ್ಯವಿಲ್ಲ’ ಎಂದು ಸರಪಂಚ ವೈಶಾಲಿ ಗಾಯಕ್ವಾಡ್ ಮತ್ತು ಉಪ ಸರಪಂಚ ಸೋಮನಾಥ ಗಾಯಕ್ವಾಡ್ ಅವರು ಅರ್ಜಿಯ ಮೇಲೆ ಷರಾ ಬರೆದಿದ್ದಾರೆ.
ಈ ನಿರ್ಧಾರದ ಬಗ್ಗೆ ಸುದ್ದಿಸಂಸ್ಥೆಯ ಪ್ರಶ್ನೆಗೆ ಸೋಮನಾಥ ಗಾಯಕ್ವಾಡ್ ಅವರು,‘ನಮ್ಮ ಗ್ರಾಮದಲ್ಲಿ ನಾವೆಂದಿಗೂ ಮುಸ್ಲಿಮರನ್ನು ಹೊಂದಿಲ್ಲ, ನಾವು ಅದನ್ನು ಬಯಸುವುದೂ ಇಲ್ಲ. ಯಾವುದೇ ರೀತಿಯ ವಿವಾದ ನಮಗೆ ಬೇಕಿಲ್ಲ, ಹೀಗಾಗಿ ನೋಂದಣಿಯನ್ನು ನಾವು ಅನುಮೋದಿಸಿಲ್ಲ. ಅದು ಗ್ರಾಮದ ಸಾಮೂಹಿಕ ನಿರ್ಧಾರವಾಗಿದೆ ಮತ್ತು ನಮ್ಮ ಗ್ರಾಮದಲ್ಲಿ ಯಾವುದೇ ಮುಸ್ಲಿಮ್ ವ್ಯಕ್ತಿಯು ಬೇಡ ಎಂಬ ನಿರ್ಣಯವನ್ನು ನಾವು ಅಂಗೀಕರಿಸಿದ್ದೇವೆ. ಅವರು ಗ್ರಾಮ ಪಂಚಾಯತ್ ನ ಯಾವುದೇ ಸೇವೆಗಳನ್ನು ಪಡೆಯಲು ನಾವು ಬಿಡುವುದಿಲ್ಲ, ಗ್ರಾಮಸ್ಥರು ನನ್ನನ್ನು ಸಂಪರ್ಕಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ಉತ್ತರಿಸಿದರು.
‘ಅವರು ನಿವೇಶನವನ್ನು ಮಾರಾಟ ಮಾಡಿ ಬೇರೆ ಸ್ಥಳಕ್ಕೆ ತೆರಳಿದರೆ ಗ್ರಾಮ ಪಂಚಾಯತ್ನ ಪರವಾಗಿ ನಾವು ಅವರನ್ನು ಗೌರವಿಸುತ್ತೇವೆ. ಆದರೆ ಅವರು ನಮ್ಮ ಮಾತನ್ನು ಕೇಳದಿದ್ದರೆ ಭವಿಷ್ಯದಲ್ಲಿ ಗ್ರಾಮಸ್ಥರೊಂದಿಗೆ ಯಾವುದೇ ವಿವಾದಕ್ಕೆ ಅವರೇ ಹೊಣೆಯಾಗಿರುತ್ತಾರೆ’ ಎಂದರು.
ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ವಾಸದ ಉದ್ದೇಶದಿಂದ ನಾವು ನಿವೇಶನದಲ್ಲಿ ಪುಟ್ಟ ಕಟ್ಟಡವನ್ನು ನಿರ್ಮಿಸಿದ್ದೇವೆ. ಭವಿಷ್ಯದಲ್ಲಿ ಸಣ್ಣ ಅಂಗಡಿಯೊಂದನ್ನು ಹಾಕುವ ಯೋಜನೆಯನ್ನೂ ಹೊಂದಿದ್ದೇವೆ. ನಾವೂ ಈ ದೇಶದ ಪ್ರಜೆಗಳಾಗಿದ್ದೇವೆ ಮತ್ತು ಸಂವಿಧಾನವು ಎಲ್ಲಿ ಬೇಕಾದರೂ ಹೋಗಿ ಬದುಕುವ ಹಕ್ಕನ್ನು ನಮಗೆ ನೀಡಿದೆ ’ ಎಂದು ಜಾವೇದ್ ಮುಲ್ಲಾ ಹೇಳಿದರು.
ಪೊಲೀಸರಿಗೆ ಈ ಕುರಿತು ಮಾಹಿತಿಯಿಲ್ಲ ಎಂದು ಹೇಳಿದ ಪುಣೆ ಗ್ರಾಮೀಣ ಎಸ್ಪಿ ಅಂಕಿತ ಗೋಯಲ್ ಅವರು,ಈ ವಿಷಯದಲ್ಲಿ ಯಾರಾದರೂ ದೂರು ಸಲ್ಲಿಸಿದರೆ ಮಾತ್ರ ನಾವು ಗಮನವನ್ನು ಹರಿಸಬಹುದು. ಇಂತಹ ಘಟನೆ ನಡೆದಿದ್ದರೆ ನಾವು ಗ್ರಾಮ ಪಂಚಾಯತ್ಗೆ ಪತ್ರವನ್ನು ಬರೆಯುತ್ತೇವೆ. ಈ ವಿಷಯವು ಜಿಲ್ಲಾ ಪರಿಷದ್ನ ವ್ಯಾಪ್ತಿಗೆ ಬರುತ್ತದೆ. ಇದನ್ನು ಪರಿಶೀಲಿಸಲು ಅವರು ಸೂಕ್ತ ಅಧಿಕಾರಿಗಳಾಗಿದ್ದಾರೆ. ದೂರು ಸಲ್ಲಿಕೆಯಾದರೆ ಮಾತ್ರ ನಾವು ಕ್ರಮವನ್ನು ಕೈಗೊಳ್ಳುತ್ತೇವೆ ’ಎಂದು ತಿಳಿಸಿದರು.