ಮಹಿಳೆಯರ ವಿರುದ್ಧದ ಅಪರಾಧ ತಡೆಗೆ ಕಠಿಣ ಕಾನೂನು ರೂಪಿಸಿದ್ದೇವೆ: ಪ್ರಧಾನಿ ಮೋದಿ

ನರೇಂದ್ರ ಮೋದಿ | PC : PTI
ಗಾಂಧಿನಗರ: ನಮ್ಮ ಸರಕಾರ ಅತ್ಯಾಚಾರದಂತಹ ಘೋರ ಅಪರಾಧಗಳಲ್ಲಿ ತೊಡಗುವವರಿಗೆ ಮರಣದಂಡನೆ ವಿಧಿಸಲು ನಿಯಮ ರೂಪಿಸುವುದರೊಂದಿಗೆ ಮಹಿಳೆಯರ ಸುರಕ್ಷೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿದೆ. ಮಹಿಳೆಯರ ವಿರುದ್ಧದ ಅಪರಾಧವನ್ನು ತಡೆಗಟ್ಟಲು ಕಠಿಣ ಕಾನೂನು ಹಾಗೂ ನಿಯಮಗಳನ್ನು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನು (ಭಾರತೀಯ ದಂಡ ಸಂಹಿತೆ) ಬದಲಿಗೆ ಜಾರಿಗೆ ತರಲಾದ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮಹಿಳಾ ಸುರಕ್ಷೆಗೆ ಸಂಬಂಧಿಸಿದ ಕಾನೂನಿನ ನಿಯಮಗಳನ್ನು ಸುದೃಢಗೊಳಿಸಿದೆ. ದೂರು ದಾಖಲಿಸುವುದನ್ನು ಸುಲಭಗೊಳಿಸಿದೆ ಹಾಗೂ ನ್ಯಾಯ ನೀಡುವುದನ್ನು ತ್ವರಿತಗೊಳಿಸಿದೆ ಎಂದರು.
ಅಂತರ ರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಜರಾತ್ನ ನವಸಿರಿ ಜಿಲ್ಲೆಯ ವಂಶಿ ಬೊರ್ಸಿ ಗ್ರಾಮದಲ್ಲಿ ಬೃಹತ್ ಜನಸಂದಣಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ತ್ವರಿತ ಪ್ರಗತಿಗೆ ಭಾರತ ಮಹಿಳಾ ನೇತೃತ್ವದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರು.
ಹುಡುಗಿ ಮನೆಗೆ ತಡವಾಗಿ ಬಂದರೆ, ಆಕೆಯ ಹೆತ್ತವರು ಪ್ರಶ್ನಿಸುತ್ತಾರೆ. ಆದರೆ, ಹುಡುಗ ಮನೆಗೆ ತಡವಾಗಿ ಬಂದರೆ, ಅವರು ಯಾವುದೇ ಪ್ರಶ್ನೆ ಕೇಳುವುದಿಲ್ಲ. ಕಳೆದ ದಶಕದಲ್ಲಿ ನಾವು ಮಹಿಳೆಯರ ಸುರಕ್ಷೆ ಹಾಗೂ ಭದ್ರತೆಗೆ ಅತಿ ಹೆಚ್ಚು ಆದ್ಯತೆ ನೀಡಿದ್ದೇವೆ. ಮಹಿಳೆಯರ ವಿರುದ್ಧದ ಅಪರಾಧವನ್ನು ತಡೆಯಲು ನಾವು ಕಠಿಣ ನಿಯಮ ಹಾಗೂ ಕಾನೂನುಗಳನ್ನು ರೂಪಿಸಿದ್ದೇವೆ ಎಂದು ಅವರು ತಿಳಿಸಿದರು.
ಮಹಿಳೆಯರ ವಿರುದ್ಧದ ಗಂಭೀರ ಅಪರಾಧಗಳಲ್ಲಿ ತ್ವರಿತ ನ್ಯಾಯ ನೀಡಲು ಸರಕಾರ ತ್ವರಿತ ನ್ಯಾಯಾಲಯಗಳನ್ನು ಆರಂಭಿಸಿದೆ. ದೇಶಾದ್ಯಂತ ಸುಮಾರು 800 ನ್ಯಾಯಾಲಯಗಳಿಗೆ ಅನುಮತಿ ನೀಡಲಾಗಿದೆ. ಇವುಗಳಲ್ಲಿ ಹೆಚ್ಚಿನವು ಈಗ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ನ್ಯಾಯ ವಿಳಂಬ ಈ ಹಿಂದೆ ಸಂತ್ರಸ್ತರ ಸಾಮಾನ್ಯ ದೂರುಗಳಾಗಿದ್ದವು. ಆದರೆ, ಇದನ್ನು ಪರಿಹರಿಸುವಲ್ಲಿ ನೂತನ ಕಾನೂನು ಅತ್ಯಾಚಾರದಂತಹ ಘೋರ ಅಪರಾಧ ಪ್ರಕರಣಗಳಲ್ಲಿ 60 ದಿನಗಳಲ್ಲಿ ಆರೋಪಗಳನ್ನು ರೂಪಿಸಿ ಹಾಗೂ 45 ದಿನಗಳಲ್ಲಿ ತೀರ್ಪು ನೀಡಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ ಎಂದು ಮೋದಿ ತಿಳಿಸಿದ್ದಾರೆ.