ಸಂವಿಧಾನ ಬದಲಾಯಿಸಲು ನಮಗೆ ಇನ್ನಷ್ಟು ಬಹುಮತ ಬೇಕು: ಮತ್ತೋರ್ವ ಬಿಜೆಪಿ ಸಂಸದನಿಂದ ಸಂವಿಧಾನ ಬದಲಾಯಿಸುವ ಪ್ರಸ್ತಾಪ
ಲಲ್ಲು ಸಿಂಗ್ | PC : theprint.in
ಫೈಝಾಬಾದ್: ಸಂವಿಧಾನ ಬದಲಾಯಿಸಲು ನಮಗೆ ಇನ್ನಷ್ಟು ಬಹುಮತ ಬೇಕಿದೆ ಎಂದು ಮತ್ತೋರ್ವ ಬಿಜೆಪಿ ಸಂಸದ ಹೇಳಿಕೆ ನೀಡಿದ್ದಾರೆ.
ಫೈಝಾಬಾದ್ ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಂವಿಧಾನವನ್ನು ತಿದ್ದುಪಡಿ ಮಾಡಲು ಅಥವಾ ನೂತನ ಸಂವಿಧಾನವನ್ನು ರಚಿಸಲು ನಮಗೆ ಮೂರನೆ ಎರಡರಷ್ಟು ಬಹುಮತದ ಅಗತ್ಯವಿದೆ ಎಂದು ಹೇಳಿದ್ದಾರೆ.
ಕೆಲವು ವಾರಗಳ ಹಿಂದೆ, ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಅವರು, ಸಂವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಲು ನಮಗೆ ಇನ್ನಷ್ಟು ಬಹುಮತ ಬೇಕಿದೆ ಎಂದು ಹೇಳಿಕ ನೀಡಿದ್ದರು.
ಫೈಝಾಬಾದ್ ಸಂಸದನ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಿರುವ ಅಯೋಧ್ಯ ಜಿಲ್ಲೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್, “ಪ್ರಧಾನಿ ಈಗಾಗಲೇ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರೂ, ಲಲ್ಲು ಸಿಂಗ್ ಯಾವ ಆಯಾಮದಲ್ಲಿ ಆ ಹೇಳಿಕೆಯನ್ನು ನೀಡಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ತಿಳಿಸಿದ್ದಾರೆ.
ಶನಿವಾರ ಸಂಜೆ ತಮ್ಮ ಲೋಕಸಭಾ ಕ್ಷೇತ್ರದ ಮಿಲ್ಕಿಪುರ್ ತಾಲ್ಲೂಕಿನ ಕುಂದುರ್ಖಾ ಕಲನ್ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳದಲ್ಲಿ, “272 ಸಂಸದ ಬಲದೊಂದಿಗೆ ಸರಕಾರವನ್ನು ರಚಿಸಬಹುದು. ಆದರೆ, ಸಂವಿಧಾನವನ್ನು ತಿದ್ದುಪಡಿ ಮಾಡಲು ಅಥವಾ ನೂತನ ಸಂವಿಧಾನವನ್ನು ರಚಿಸಲು ನಮಗೆ 2024ರ ಲೋಕಸಭಾ ಚುನಾವಣೆಯಲ್ಲಿ ಮೂರನೆಯ ಎರಡರಷ್ಟು ಬಹುಮತದ ಅಗತ್ಯವಿದೆ” ಎಂದು ಲಲ್ಲು ಸಿಂಗ್ ಹೇಳುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಕೇಳಬಹುದಾಗಿದೆ.
ಈ ಕುರಿತು ಲಲ್ಲು ಸಿಂಗ್ ಅವರನ್ನು ಪ್ರಶ್ನಿಸಿದಾಗ, “ವಿವಾದವೇನಿದೆ? ಕಾಲ ಕಾಲಕ್ಕೆ ಅಗತ್ಯವಿದ್ದಾಗಲೆಲ್ಲ ಸಂವಿಧಾನಕ್ಕೆ ನಿಯಮಾನುಸಾರ ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ನೀವು ಮೂರನೆ ಎರಡರಷ್ಟು ಬಹುಮತದ ಅಗತ್ಯದ ಕುರಿತು ಮಾತನಾಡಿರುವುದೇಕೆ ಎಂಬ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಲಲ್ಲು ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, “ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಮೀಸಲಾತಿಯನ್ನು ಹೊಸ ಸಂವಿಧಾನದ ಮೂಲಕ ಅಂತ್ಯಗೊಳಿಸಲು ಬಿಜೆಪಿ ಬಯಸುತ್ತಿರುವುದರಿಂದ ಅವರೆಲ್ಲ ಬಿಜೆಪಿಯನ್ನು ಪರಾಭವಗೊಳಿಸಲಿದ್ದಾರೆ. ಜನರ ಸೇವೆ ಅಥವಾ ಕಲ್ಯಾಣ ಮಾಡಲು ಬಿಜೆಪಿ ಗೆಲುವು ಬಯಸುತ್ತಿಲ್ಲ. ಬದಲಿಗೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಿಸಲು ಗೆಲುವು ಬಯಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.