ನಾವೆಂದಿಗೂ ಭಾರತೀಯರನ್ನು ನಮ್ಮ ಸೇನೆಗೆ ಬಯಸಿರಲಿಲ್ಲ : ರಶ್ಯ
PC : indianexpress.com
ಹೊಸದಿಲ್ಲಿ: ರಶ್ಯ ಸೇನೆಯಲ್ಲಿ ನೆರವು ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರ ಕುರಿತು ಮೊತ್ತಮೊದಲ ಹೇಳಿಕೆ ನೀಡಿರುವ ರಶ್ಯ ಸರಕಾರದ ರಕ್ಷಣಾ ಸಚಿವ ರೋಮನ್ ಬಾಬುಶ್ಕಿನ್, ರಶ್ಯವೆಂದಿಗೂ ಭಾರತೀಯರು ತನ್ನ ಸೇನೆಯ ಭಾಗವಾಗುವುದನ್ನು ಬಯಸಿರಲಿಲ್ಲ ಹಾಗೂ ಉಕ್ರೇನ್ನೊಂದಿಗೆ ನಡೆಯುತ್ತಿರುವ ಸಂಘರ್ಷಕ್ಕೆ ಹೋಲಿಸಿದಾಗ, ರಶ್ಯ ಸೇನೆಯಲ್ಲಿರುವ ಭಾರತೀಯರ ಪ್ರಮಾಣ ನಗಣ್ಯ ಎಂದು ಹೇಳಿದ್ದಾರೆ.
ರಶ್ಯ ಸೇನೆಯಲ್ಲಿ ನೆರವು ಸಿಬ್ಬಂದಿಗಳಾಗಿ ನೇಮಕಗೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಮರಳಿಸಬೇಕು ಎಂಬ ಭಾರತದ ಬೇಡಿಕೆಯ ಬಗ್ಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಬಯಸುತ್ತಿದ್ದೇನೆ ಹಾಗೂ ಭಾರತೀಯರ ನೇಮಕಾತಿಯು ಸಂಪೂರ್ಣವಾಗಿ ವಾಣಿಜ್ಯಾತ್ಮಕವಾದುದು ಎಂದು ಬುಧವಾರ ರಶ್ಯ ಸರಕಾರ ಸ್ಪಷ್ಟನೆ ನೀಡಿದೆ.
"ಈ ವಿಷಯದ ಕುರಿತು ನಮ್ಮ ಹಾಗೂ ಭಾರತದ ನಿಲುವು ಒಂದೇ ಆಗಿದೆ. ಈ ವಿಷಯವು ಶೀಘ್ರವೇ ಬಗೆಹರಿಯಿದೆ ಎಂದು ನಾವು ಭಾವಿಸಿದ್ದೇವೆ" ಎಂದು ಮಾಧ್ಯಮ ವಿವರಣೆಯ ಸಂದರ್ಭದಲ್ಲಿ ರಶ್ಯ ರಕ್ಷಣಾ ಸಚಿವ ರೋಮನ್ ಬಾಬುಶ್ಕಿನ್ ಹೇಳಿದ್ದಾರೆ.
ರಶ್ಯ ಸೇನೆಯಲ್ಲಿ ನೆರವು ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರ ಕುರಿತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಳಿ ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಪ್ರಸ್ತಾಪಿಸಿದ ನಂತರ ರೋಮನ್ ಬಾಬುಶ್ಕಿನ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಈ ವಿಷಯವನ್ನು ರಾಜಕೀಕರಣಗೊಳಿಸಬಾರದು ಎಂದು ಅವರು ಒತ್ತಿ ಹೇಳಿದ್ದಾರೆ.