"ನಮ್ಮ ಧರ್ಮ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ": ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
Photo | PTI
ಲಕ್ನೋ: ನಮ್ಮ ಧರ್ಮ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ. ಜನರು ರಾಷ್ಟ್ರವನ್ನು ಎಲ್ಲಕ್ಕಿಂತ ಮಿಗಿಲಾಗಿಡಬೇಕು ಮತ್ತು ಜನರ ಕೆಲಸವು ‘ಸನಾತನ ಧರ್ಮ’ದ ಮೌಲ್ಯಗಳಿಗೆ ಅನುಗುಣವಾಗಿರಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಾರಣಾಸಿಯಲ್ಲಿ ವಿಹಂಗಮ ಯೋಗ ಸಂತ ಸಮಾಜದ 100ನೇ ವರ್ಷಾಚರಣೆಯ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಪ್ರತಿಯೊಂದು ಕೆಲಸವೂ ದೇಶಕ್ಕಾಗಿ ನಡೆಯಬೇಕು. ದೇಶ ಸುರಕ್ಷಿತವಾಗಿದ್ದರೆ ಧರ್ಮ ಸುರಕ್ಷಿತವಾಗಿರುತ್ತದೆ. ಧರ್ಮ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ ಎಂದು ಹೇಳಿದ್ದಾರೆ.
ನಿಜವಾದ ಸಂತ ಕಡಿಮೆ ಮಾತನಾಡುತ್ತಾನೆ ಮತ್ತು ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾನೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್, ನಿಜವಾದ ಸಂತನು ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ತೋರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಮಾಜ ಮತ್ತು ದೇಶದಲ್ಲಿ ಏನಾದರೂ ತಪ್ಪುಗಳು ಸಂಭವಿಸುತ್ತಿದೆ ಎಂದಾಗ ಸಂತನು ಮೂಕ ಪ್ರೇಕ್ಷಕನಾಗಿ ಉಳಿಯಲಾರ. ಪ್ರತಿಯೊಂದು ಕೆಲಸವನ್ನೂ ದೇಶಕ್ಕೆ ಸಮರ್ಪಿಸಬೇಕು. ನಾವು ಭಾರತದ ವೈದಿಕ ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಅದು ಸನಾತನ ಧರ್ಮದ ಮೌಲ್ಯಗಳಿಗೆ ಅನುಗುಣವಾಗಿದೆ ಎಂದು ದೃಢಪಡಿಸಿಕೊಳ್ಳಬೇಕು ಎಂದು ಆದಿತ್ಯನಾಥ್ ಹೇಳಿದ್ದಾರೆ.