ಪಶ್ಚಿಮ ಬಂಗಾಳ | ಆನೆ-ಮಾನವ ಸಂಘರ್ಷ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಆನೆ-ಮಾನವ ಸಂಘರ್ಷ ಸಂಕೀರ್ಣ ಸಮಸ್ಯೆಯಾಗಿ ರೂಪಾಂತರಗೊಂಡಿದೆ. ಆನೆಗಳ ಉಪಟಳವನ್ನು ತಪ್ಪಿಸಿಕೊಳ್ಳಲು ಅರಣ್ಯ ಭಾಗಗಳಲ್ಲಿ ವಾಸಿಸುವ ನಿವಾಸಿಗಳು ತಮ್ಮ ಜಮೀನುಗಳಿಗೆ ವಿದ್ಯುತ್ ತಂತಿ ಬೇಲಿ ಅಳವಡಿಸುವುದರಿಂದ ಹಿಡಿದು, ಅವುಗಳನ್ನು ಹಿಮ್ಮೆಟ್ಟಿಸಲು ಸಿಡಿಗುಂಡುಗಳನ್ನು ಸ್ಫೋಟಿಸುವವರೆಗೆ ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ವನ್ಯಜೀವಿಗಳ ಮೇಲೆ, ವಿಶೇಷವಾಗಿ ಆನೆಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡುವ ಸಿಡಿಗುಂಡುಗಳ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ, ಅವುಗಳ ಬಳಕೆ ವ್ಯಾಪಕವಾಗಿ ಮುಂದುವರಿದಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ತನ್ನ ಆದೇಶಗಳ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಗೆ ಗುರುವಾರ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಪಶ್ಚಿಮ ಬಂಗಾಳದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆಯ ಮುಖ್ಯಸ್ಥ)ರಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾ. ಬಿ.ಆರ್.ಗವಾಯಿ ಹಾಗೂ ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ, ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ಕೆಲವು ರಾಜ್ಯಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಯಲು, ವಿಶೇಷವಾಗಿ ಮಾನವ-ಆನೆ ಸಂಘರ್ಷವನ್ನು ತಡೆಯಲು ಬಳಸಲಾಗುವ ಕ್ರೂರ ವಿಧಾನಗಳ ಮೇಲೆ ಬೆಳಕು ಚೆಲ್ಲಲಾಗಿದ್ದ ಅರ್ಜಿಯ ವಿಚಾರಣೆ ನಡೆಸುವಾಗ, ಆಗಸ್ಟ್ 1, 2018 ಹಾಗೂ ಡಿಸೆಂಬರ್ 4, 2018ರಂದು ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಅರ್ಜಿದಾರೆ ಪ್ರೇರಣಾ ಸಿಂಗ್ ಬಿಂದ್ರಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಆಗಸ್ಟ್ 1, 2018ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ ಆನೆಗಳನ್ನು ಓಡಿಸುವಾಗ ಮೊಳೆಗಳನ್ನು ಬಳಸುವುದು ಅಥವಾ ಸಿಡಿಮದ್ದುಗಳನ್ನು ಬಳಸುವುದರಿಂದ ದೂರ ಉಳಿಯಬೇಕು. ಮೊಳೆಗಳನ್ನು ತೆಗೆಯಲು ಹಾಗೂ ಸಿಡಿಮದ್ದುಗಳ ಬಳಕೆಯಿಂದ ದೂರ ಉಳಿಯಲು ಸಂಬಂಧಿತ ರಾಜ್ಯಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿರುವುದನ್ನು ವಕೀಲೆ ಶಿಬಾನಿ ಘೋಷ್ ಮೂಲಕ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
“ಜನವಸತಿ ಪ್ರದೇಶಗಳತ್ತ ಹಾಗೂ ಬೆಳೆ ಪ್ರದೇಶಗಳತ್ತ ಬರುವ ಆನೆಗಳನ್ನು ಓಡಿಸಲು ಅಥವಾ ಅಟ್ಟಾಡಿಸಲು ಸಿಡಿಮದ್ದುಗಳನ್ನು ಬಳಸುವಂತಿಲ್ಲ ಎಂದು ಈ ಎರಡು ಆದೇಶಗಳ ಮೂಲಕ ಈ ನ್ಯಾಯಾಲಯವು ಪಶ್ಚಿಮ ಬಂಗಾಳ ಸರಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿತ್ತು” ಎಂದು ಅರ್ಜಿಯಲ್ಲಿ ಗಮನ ಸೆಳೆಯಲಾಗಿದೆ.
ತುರ್ತು ಕ್ರಮದ ಭಾಗವಾಗಿ ಸೀಮಿತ ಅವಧಿಗೆ ಹೊರತುಪಡಿಸಿದರೆ, ಮಶಾಲ್ ಗಳು ಅಥವಾ ಸಿಡಿಗುಂಡುಗಳನ್ನು ಬಳಸುವುದರಿಂದ ದೂರ ಉಳಿಯಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿತ್ತು. ಅದರ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ ಇಂತಹ ಕ್ರೂರ ಹಾಗೂ ಬರ್ಬರ ತಂತ್ರಗಳ ಬಳಕೆ ಮುಂದುವರಿದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದ ಝಾರ್ಗ್ರಾಮ್ ಹೊರವಲಯದಲ್ಲಿರುವ ಕಾಲನಿಯೊಂದಕ್ಕೆ ಆಗಸ್ಟ್ 15, 2024ರಂದು ಆನೆಗಳ ಹಿಂಡೊಂದು ಪ್ರವೇಶಿಸಿದ್ದ ಘಟನೆಗೆ ಈ ಅರ್ಜಿ ಸಂಬಂಧಿಸಿದೆ. ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಆನೆಯೊಂದು ವೃದ್ಧ ನಿವಾಸಿಯೊಬ್ಬರನ್ನು ಕೊಂದಿತ್ತು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಹುಲ್ಲಾ ಪಕ್ಷಕ್ಕೆ ಸೇರಿರುವ ಸದಸ್ಯರೊಬ್ಬರು ಹೆಣ್ಣು ಆನೆಯೊಂದರ ಮೇಲೆ ಮಶಾಲ್ ಅನ್ನು ಎಸೆದು, ಉರಿಯುತ್ತಿರುವ ಮೊಳೆಯಿಂದ ಅದರ ಬೆನ್ನ ಮೂಳೆಯ ಮೇಲೆ ಬರೆ ಎಳೆದಿದ್ದರಿಂದ, ಅದು ಸ್ಥಳದಲ್ಲೇ ಸಾವನ್ನಪ್ಪಿತ್ತು ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಆನೆಗಳನ್ನು ಬೆದರಿಸಲು ಮಶಾಲ್ ಗಳು, ಚೂಪಾದ ಲೋಹದ ಸಲಾಕೆಗಳು, ಸಿಡಿಗುಂಡುಗಳು, ಉರಿಯುವ ವಸ್ತುಗಳನ್ನು ಬಳಸುವುದು ಅತ್ಯಂತ ಕ್ರೂರ ಮತ್ತು ಬರ್ಬರವಾಗಿದ್ದು, ಇದರಿಂದ ಆನೆಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವುಂಟಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.