ಪಶ್ಚಿಮ ಬಂಗಾಳ : ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕೋಮು ಘರ್ಷಣೆ, ನಿಷೇಧಾಜ್ಞೆ ಜಾರಿ
PC : PTI
ಮುರ್ಷಿದಾಬಾದ್ : ಮುರ್ಷಿದಾಬಾದ್ ಜಿಲ್ಲೆಯ ಬೇಲಡಂಗಾ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಹಿಂದು ಮತ್ತು ಮುಸ್ಲಿಮ್ ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಿದ್ದು, ಜಿಲ್ಲಾಡಳಿತವು ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.
ಕಾರ್ತಿಕ ಪೂಜಾ ಹಬ್ಬಕ್ಕಾಗಿ ಸ್ಥಾಪಿಸಲಾದ ತಾತ್ಕಾಲಿಕ ರಚನೆಯ ನಿಯಾನ್ ನಾಮಫಲಕದ ಮೇಲೆ ಬರೆಯಲಾಗಿದ್ದ ಅವಹೇಳನಕಾರಿ ಸಂದೇಶವು ಹಿಂಸಾಚಾರಕ್ಕೆ ಕಾರಣವಾಗಿತ್ತು.
ಉಭಯ ಗುಂಪುಗಳು ಪರಸ್ಪರರತ್ತ ಇಟ್ಟಿಗೆಗಳನ್ನು ತೂರಿದ್ದು, ದಾಂಧಲೆ ಮತ್ತು ಬೆಂಕಿ ಹಚ್ಚುವ ಕೃತ್ಯಗಳಲ್ಲಿ ತೊಡಗಿಕೊಂಡಿದ್ದವು. ಹಿಂಸಾಚಾರದ ಸಂದರ್ಭದಲ್ಲಿ ಹಲವಾರು ಅಂಗಡಿಗಳು ಮತ್ತು ಮನೆಗಳು ಲೂಟಿಗೊಳಗಾಗಿದ್ದವು ಎಂದು ಅನಾಮಿಕ ಪೋಲಿಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲಿಸರು ಲಾಠಿ ಪ್ರಹಾರ ನಡೆಸಿದರು. ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 163ರಡಿ ಐದು ಅಥವಾ ಹೆಚ್ಚಿನ ಜನರು ಒಂದು ಸ್ಥಳದಲ್ಲಿ ಸೇರುವುದನ್ನು ನಿಷೇಧಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 15ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
‘ಪ್ರದೇಶದಲ್ಲಿಯ ಹಿಂದುಗಳ ಮನೆಗಳ ಮೇಲೆ ದಾಳಿಗಳು ನಡೆದಿದ್ದು, ಪೋಲಿಸರು ಮೂಕಪ್ರೇಕ್ಷಕರಾಗಿದ್ದರು ’ ಎಂದು ಬಿಜೆಪಿ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದೆ.